ಬೈರಾಡಿ ಕೆರೆಯಲ್ಲಿ ಮೀನು ಹಿಡಿಯುವ ಸ್ಪರ್ಧೆ

ಮಂಗಳೂರು, ಆ. 6: ನಗರದ ಪಡೀಲಿನಲ್ಲಿರುವ ಬೈರಾಡಿಕೆರೆಯಲ್ಲಿ ಕೆರೆ ಸಂರಕ್ಷಣಾ ಸಮಿತಿಯು ರವಿವಾರ ಸಾರ್ವಜನಿಕ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ನಗರದ ಬೈರಾಡಿ ಕೆರೆಯು ಶೀಘ್ರದಲ್ಲಿ 3 ಕೋ. ರೂ. ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಪೂರಕವಾಗಲಿದೆ. ಜತೆಗೆ ಇದು ಯುವಜನತೆಯಲ್ಲಿ ಉತ್ತಮ ಹವ್ಯಾಸ ಬೆಳೆಯಲು ಪ್ರೇರೇಪಣೆ ನೀಡಲಿದೆ ಎಂದರು.
ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯ 1 ಕೋ.ರೂ.ಹಾಗೂ ಮುಡಾದ 2 ಕೋ.ರೂ.ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದೆ. ಕೆರೆ ಸಂರಕ್ಷಣಾ ಸಮಿತಿಯು ಹಲವು ವರ್ಷಗಳಿಂದ ಕೆರೆಯ ಸಂರಕ್ಷಣೆಯ ಕುರಿತು ವಿಶೇಷ ಕಾರ್ಯ ಮಾಡುತ್ತಿದೆ. ಜತೆಗೆ ಅಭಿವೃದ್ಧಿ ಸಮಿತಿಯನ್ನೂ ರಚಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಜನತೆ ಕೆರೆಯ ಕುರಿತು ಕಾಳಜಿ ವಹಿಸುತ್ತಾರೆ ಎಂದು ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ಮೇಯರ್ ಕವಿತಾ ಸನಿಲ್ ಮಾತನಾಡಿ, ಯುವಕರು ಇಂತಹ ಒಳ್ಳೆಯ ಚಟುವಟಿಕೆಯ ಮೂಲಕ ಕಾಲ ಕಳೆದಾಗ ದುಶ್ಚಟಗಳ ದಾಸರಾಗುವುದು ತಪ್ಪುತ್ತದೆ. ಮಹಿಳೆಯರು ಕೂಡ ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದು ಅಗತ್ಯ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ ಮಾತನಾಡಿ, ಮೀನು ಹಿಡಿಯುವುದು ಎಂಬುದು ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಸಂಸ್ಕೃತಿಯಾಗಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಸಂರಕ್ಷಣಾ ಸಮಿತಿಯ ಪ್ರಯತ್ನ ಶ್ಲಾಘನೀಯ ಎಂದರು.
ಈ ಸಂದರ್ಭ ಕಾರ್ಪೊರೇಟರ್ ಪ್ರಕಾಶ್ ಬಿ, ಮುಡಾ ಸದಸ್ಯೆ ಶೋಭಾ ಕೇಶವ್, ಪ್ರಮುಖರಾದ ಸದಾನಂದ ನಾವರ, ಡೆನಿಸ್ ಡಿಸಿಲ್ವಾ, ಹೆನ್ರಿ ಪೆರಾವೊ, ಚಂದಪ್ಪ, ಅನಿಲ್ ಕೆಂಬಾರ್, ತಾರಾನಾಥ ಸುವರ್ಣ, ಸಂತೋಷ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂರಕ್ಷಣಾ ಸಮಿತಿಯ ಪ್ರಧಾನ ಸಂಚಾಲಕ ಡಾ. ಎಂ.ಅಣ್ಣಯ್ಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.







