ದ್ವಿತೀಯ ಟೆಸ್ಟ್: ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

ಕೊಲಂಬೊ, ಆ.6: ಆರಂಭಿಕ ಆಟಗಾರ ಕರುಣರತ್ನೆ ಹೋರಾಟಕಾರಿ ಶತಕದ(141)ಹೊರತಾಗಿಯೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(5-152) ದಾಳಿಗೆ ಕಂಗಲಾದ ಶ್ರೀಲಂಕಾ ತಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಇನಿಂಗ್ಸ್ ಹಾಗೂ 53 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿದೆ.
ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಪಡೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಮೂರನೆ ದಿನವಾದ ಶನಿವಾರ ಫಾಲೋ-ಆನ್‌ಗೆ ಸಿಲುಕಿದ್ದ ಶ್ರೀಲಂಕಾ ರವಿವಾರ 2 ವಿಕೆಟ್ ನಷ್ಟಕ್ಕೆ 209 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿತು. ಜಡೇಜ, ಅಶ್ವಿನ್(2-132) ಹಾಗೂ ಹಾರ್ದಿಕ್ ಪಾಂಡ್ಯ(2-31)ದಾಳಿ ಎದುರಿಸಲು ವಿಫಲವಾದ ಶ್ರೀಲಂಕಾ ಎರಡನೆ ಇನಿಂಗ್ಸ್‌ನಲ್ಲಿ 116.5 ಓವರ್‌ಗಳಲ್ಲಿ 386 ರನ್ ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಅಜೇಯ 93 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕರುಣರತ್ನೆ 307 ಎಸೆತಗಳಲ್ಲಿ 16 ಬೌಂಡರಿಗಳ ಸಹಿತ 141 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು. ನಾಯಕ ದಿನೇಶ್ ಚಾಂಡಿಮಾಲ್(2)ಬೇಗನೆ ವಿಕೆಟ್ ಒಪ್ಪಿಸಿದರು. ಮಾಜಿ ನಾಯಕ ಆಂಜೆಲೊ ಮ್ಯಾಥ್ಯೂಸ್(36), ಡಿಕ್ವೆಲ್ಲಾ(31), ಧನಂಜಯ್ ಡಿಸಿಲ್ವಾ(17)ಹಾಗೂ ಹೆರಾತ್(ಅಜೇಯ 17)ಎರಡಂಕೆಯ ಸ್ಕೋರ್ ಗಳಿಸಿದರು.





