ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸುವ ಗುರಿ: ಜಿ.ಶಂಕರ್

ಉಡುಪಿ, ಆ.6: ಒಂದು ಯುನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು. ರಕ್ತದಾನ ಎಂಬುದು ಪುಣ್ಯದ ಕೆಲಸ. ಈಗಾಗಲೇ ದಾನಿಗಳ ಸಹಕಾರದಿಂದ 92,000 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದ್ದು, ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದು ಉಡುಪಿ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ. ಜಿ.ಶಂಕರ್ ತಿಳಿಸಿದ್ದಾರೆ.
ಮೊಗವೀರ ಯುವ ಸಂಘಟನೆ ಬೆಳ್ಳಂಪಳ್ಳಿ, ಉಡುಪಿ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಕಿನ್ನಿಮುಲ್ಕಿ ಕೆ.ಕೃಷ್ಣಮೂರ್ತಿ ಆಚಾರ್ಯರ ನೇತೃತ್ವದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಉಡುಪಿ ಜಿಲ್ಲಾಡಳಿತದ ಸಹಯೋಗ ದೊಂದಿಗೆ ಉಡುಪಿಯ ಮಥುರಾ ಕಂಫರ್ಟ್ಸ್‌ನಲ್ಲಿ ರವಿವಾರ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಜ್ಯದಲ್ಲಿ 30 ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆ ಮಾತ್ರ ರಕ್ತದಾನಿ ಗಳ ಜಿಲ್ಲೆ ಎಂಬುದು ಘೋಷಿತವಾಗಿದೆ. ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಜನರಿಗೆ ರಕ್ತದಾನದ ಕುರಿತು ಅರಿವು ಇಲ್ಲ. ರಕ್ತದಾನದಿಂದ ಸಮಾಜಕ್ಕೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ರಕ್ತದಾನಿಗಳಾದ ಮಂಜು ಕಿನ್ನಿಮುಲ್ಕಿ(71 ಬಾರಿ ರಕ್ತ ದಾನ), ವಿಷ್ಣುಪ್ರಸಾದ್ ಪಾಡಿಗಾರ್(62 ಬಾರಿ), ಗುರುರಾಜ್ ಮಲ್ಪೆ(42), ಮಹೇಶ್(38), ವಿಜಯ ಮಲ್ಪೆ(38), ರವೀಂದ್ರ ಪುತ್ರನ್(36) ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ್ ಕಾಂಚನ್, ಉದ್ಯಮಿ ಜೆರಿ ವಿನ್ಸೆಂಟ್ ಡಯಸ್, ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಜಯ ಸಿ.ಕೋಟ್ಯಾನ್, ನಾಗೇಶ್ ಪೂಜಾರಿ, ಹರೀಶ್ ಪೂಜಾರಿ, ಡಾ.ಮಹೇಶ್ ಉಪಸ್ಥಿತರಿದ್ದರು. ಕಿನ್ನಿಮುಲ್ಕಿ ಕೆ.ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು. ಸತೀಶ್ ಸಾಲ್ಯಾನ್ ವಂದಿಸಿದರು. ಯುವ ಬ್ರಾಹ್ಮಣ ಪರಿಷತ್ ಜಿಲ್ಲಾಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್ ಕಾರ್ಯಕ್ರಮ ನಿರೂಪಿಸಿದರು.







