‘ಚಿತ್ರಕಲೆಯಿಂದ ನಶಿಸಿ ಹೋಗಿರುವ ಜೀವ ಸಂಕುಲ ಜೀವಂತ’

ಉಡುಪಿ, ಆ.6: ಈಗಾಗಲೇ ನಶಿಸಿ ಹೋಗಿರುವ ಪ್ರಾಚೀನ ಜೀವ ಸಂಕುಲ ಗಳನ್ನು ಚಿತ್ರಕಲೆಯು ಜೀವಂತವಾಗಿರಿಸಿದ್ದು, ಇಂದಿನ ಮತ್ತು ಭವಿಷ್ಯದ ಜನಾಂಗ ಕೂಡ ಅವುಗಳ ಅಧ್ಯಯನ ಮತ್ತು ಸಂಶೋಧನೆ ಮಾಡಲು ಸಹಕಾರಿ ಯಾಗಿದೆ ಎಂದು ಮಣಿಪಾಲ ಠಾಣಾಧಿಕಾರಿ ಸುದರ್ಶನ್ ಎಂ. ಹೇಳಿದ್ದಾರೆ.
ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಸಂಭ್ರಮದ ಅಂಗವಾಗಿ ಸುವರ್ಣ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಮತ್ತು ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇವರ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಶಾಲೆಯಲ್ಲಿ ಕಲಿಯುವ ವಿದ್ಯೆಗೆ ಹೊರತಾಗಿ ಚಿತ್ರಕಲೆಯಂತಹ ಭಿನ್ನ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಮೂಡಿಸಿ ಪ್ರೋತ್ಸಾಹ ನೀಡಿ, ಪ್ರತಿಭೆ ಅನಾ ವರಣಗೊಳಿಸಲು ಅವಕಾಶ ನೀಡಿದರೆ ಅವರ ಬುದ್ಧಿಮತ್ತೆ ಪರಿಪಕ್ವವಾಗುತ್ತದೆ ಮತ್ತು ಸಮಾಜಕ್ಕೆ ಅವರಿಂದ ಒಳ್ಳೆಯ ಕೊಡುಗೆಗಳು ಲಭಿಸುತ್ತದೆ ಎಂದರು.
ವಿಜಯ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಭುವನಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯೋಪಾದ್ಯಾಯಿನಿ ಸರೋಜಿನಿ ವಿಠ್ಠಲ್ ಶೆಟ್ಟಿಗಾರ್, ಮಂಗಳ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕ ಮಂಜು ನಾಥ್ ಉಪಾಧ್ಯ, ಮೊಗವೀರ ಸಂಘಟನೆಯ ಮಾಜಿ ಅಧ್ಯಕ್ಷ ಜಯ ಸಿ. ಕೋಟ್ಯಾನ್, ನಿವೃತ್ತ ಚಿತ್ರಕಲಾ ಶಿಕ್ಷಕ ಸುಬ್ರಾಯ ಶಾಸ್ತ್ರಿ, ಸೋಮಪ್ಪ ದೇವಾ ಡಿಗ, ಉದ್ಯವಿು ಭಾಸ್ಕರ್ ಆಚಾರ್ಯ ಮಾತನಾಡಿದರು.
ಹೆರ್ಗ ಗ್ರಾಮ ಕರಣಿಕ ವಾಸುದೇವ ಆಚಾರ್ಯ, ವೇದಿಕೆ ಅಧ್ಯಕ್ಷ ಮೌನೇಶ್ ಆಚಾರ್ಯ, ಸುವರ್ಣ ಸಮಿತಿ ಕೋಶಾಧಿಕಾರಿ ಪ್ರಮೋದ್ ಕುಮಾರ್, ಆಚರಣಾ ಸಮಿತಿ ಕಾರ್ಯದರ್ಶಿ ಮನೋಜ್ ಹೆಗ್ಡೆ, ಪದಾಧಿಕಾರಿಗಳಾದ ಸದಾನಂದ ಪರ್ಕಳ, ಸಚ್ಚಿದಾನಂದ ನಾಯಕ್ ಉಪಸ್ಥಿತರಿದ್ದರು.
ಶಿವರಾಂ ಶೆಟ್ಟಿ ಸ್ವಾಗತಿಸಿದರು. ಮಂಜುನಾಥ ಮಣಿಪಾಲ ವಂದಿಸಿದರು. ಜಸ್ವಂತ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನಾದ್ಯಂತ ಸುಮಾರು 700 ಕ್ಕೂ ಹೆಚ್ಚು ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.







