ಶಿಕ್ಷಣ ಉದ್ಯೋಗಕ್ಕೆ ಸೀಮಿತ ಆಗದಿರಲಿ: ಮರಿಸ್ವಾಮಿ
ಬೆಂಗಳೂರು, ಆ. 6: ಶಿಕ್ಷಣ ಕೇವಲ ಉದ್ಯೋಗಕ್ಕೆ ಸೀಮಿತವಾಗದೆ, ಮಾನವೀಯತೆ ಹಾಗೂ ಸದ್ಗುಣಗಳ ಬೆಳವಣಿಗೆ ಪೂರಕವಾಗಿರಲಿ ಎಂದು ಪಾಂಚಜನ್ಯ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಹಾಗೂ ನಿವೃತ್ತ ಡಿಜಿಪಿ ಎಸ್.ಮರಿಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಇಲ್ಲಿನ ಮಲ್ಲತ್ತಹಳ್ಳಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಡೆದ ಮೊದಲನೆ ವರ್ಷದ ಬಿಇ ತರಗತಿಗಳ ಉದ್ಘಾಟನೆ ಹಾಗೂ ಅಭಿಶಿಕ್ಷಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾಭ್ಯಾಸದೊಡನೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಿರ್ಮಾಣಕ್ಕೆ ಯುವಜನತೆ ಮುನ್ನುಡಿ ಆಗಬೇಕೆಂದು ಅಪೇಕ್ಷೆಪಟ್ಟರು.
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಡಾ.ಎನ್.ಸಿ.ಶಿವಪ್ರಕಾಶ್ ಮಾತನಾಡಿ, ಸಂಘಟಿತ ಪರಿಶ್ರಮದಿಂದ ಸಾಫಲ್ಯ ದೊರೆಯುತ್ತದೆ. ವಿದ್ಯಾರ್ಥಿಗಳು ನಾನತ್ವ ತೊರೆದು ಪ್ರೀತಿ, ನಗು, ಜ್ಞಾನ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಕಾಲೇಜು ಶೈಕ್ಷಣಿಕ ಅವಧಿ ಅಮೂಲ್ಯವಾಗಿದ್ದು, ಇಲ್ಲಿಂದಲೇ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ಟ್ರಸ್ಟಿನ ಕಾರ್ಯದರ್ಶಿ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಶಿಕ್ಷಿತರ ಸಂಖ್ಯೆ ಸಾಗರದಷ್ಟಿದೆ. ಸಾಗರದಲ್ಲಿರುವ ಹನಿಗಳ ಲೆಕ್ಕ ಯಾರೂ ಊಹಿಸಲಾರರು. ಹೊಸ ತಂತ್ರಜ್ಞಾನ ಹಾಗೂ ಬೋಧಕರ ನೆರವು ಪಡೆದು ಎಲೆಯ ಮೇಲಿನ ಮುತ್ತಿನ ಹನಿಯಂತೆ ಪ್ರಕಾಶಮಾನ ಆಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಖಜಾಂಚಿ ಪಿ.ಎಲ್.ನಂಜುಂಡಸ್ವಾಮಿ, ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯ ಪ್ರಾಂಶುಪಾಲ ಡಾ.ಸಿ.ನಂಜುಂಡಸ್ವಾಮಿ, ಶಿವಮಲ್ಲು, ಡಾ.ಎಂ.ಎನ್. ಹೆಗ್ಡೆ, ಡಾ.ಜಿ.ರಾಜೇಂದ್ರ ಹಾಜರಿದ್ದರು.







