‘ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಟ ಅಗತ್ಯ’
ಬೆಂಗಳೂರು, ಆ.6:ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತೀರುವ ಸರಕಾರಗಳ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಂಸದರೂ ಆಗಿರುವ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಕುಮಾರ್ ಸೇನ್ ಕರೆ ನೀಡಿದ್ದಾರೆ.
ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅಂಚೆ ಇಲಾಖೆ ಸಿ-ದರ್ಜೆ ನೌಕರರ ಸಂಘಟನೆಯ 31ನೆ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ವಿರೋಧಿ ನೀತಿಗಳಿಂದ ಸರಕಾರಗಳ ವಿರುದ್ಧ ಬೃಹತ್ ಹೋರಾಟ ಸಂಘಟಿಸುವ ಅಗತ್ಯವಿದೆ ಎಂದು ಹೇಳಿದರು.
ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಸರಕಾರಿ ನೌಕರರಿಗೆ ಅಗತ್ಯ ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಒದಗಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಹೋರಾಟದಿಂದಲೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದ ಅವರು, ದೇಶದಲ್ಲಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಸರಕಾರಗಳಿಗೆ ಜನಸಾಮಾನ್ಯರ ಬವಣೆ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು. ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕಾದ ಕೇಂದ್ರ ಸರಕಾರ, ಉದ್ಯೋಗಗಳಿಗೆ ಮಾರಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ವಾರ್ಷಿಕವಾಗಿ 2.5 ಕೋಟಿ ಹುದ್ದೆಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕೇವಲ 1 ರಿಂದ 2 ಲಕ್ಷದಷ್ಟು ಮಾತ್ರ ಉದ್ಯೋಗ ಸೃಷ್ಟಿಸಿ ಕಾರ್ಮಿಕರ ಕುರಿತಂತೆ ತನ್ನ ಬೇಜವಾಬ್ದಾರಿ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.
ಅಂಚೆ ಇಲಾಖೆ ಸಿ-ದರ್ಜೆ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಚಂದ್ರಶೇಖರ್ ಮಾತನಾಡಿ, ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಸೇವೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ಒದಗಿಸಿ, 7ನೆ ವೇತನ ಆಯೋಗದ ಶಿಫಾರಸ್ಸುನ್ನು ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ವಸತಿ ಖಾತೆ ಸಚಿವ ಎಂ.ಕೃಷ್ಣಪ್ಪ, ಅಂಚೆ ಇಲಾಖೆ ಕಾರ್ಯದರ್ಶಿ ಎ.ಎನ್.ನಂದಾ, ಅಂಚೆ ಚೀಫ್ ಪೋಸ್ಟ್ ಮಾಸ್ಟರ್ ಚಾರ್ಲ್ಸ ಲೋಬೋ ಸೇರಿ ಪ್ರಮುಖರು ಹಾಜರಿದ್ದರು.







