ಯುವ ಕಾಂಗ್ರೇಸ್ ಕಾರ್ಯಕರ್ತರು ಸಮಾಜಮುಖಿಗಳಾಗಿ ಕೆಲಸ ಮಾಡಬೇಕು: ಎ.ಎನ್.ಮಹೇಶ್

ಚಿಕ್ಕಮಗಳೂರು, ಆ. 6:ಯುವ ಕಾಂಗ್ರೇಸ್ ಕಾರ್ಯಕರ್ತರು ರಾಜಕಾರಣಕ್ಕೆ ಮಾತ್ರ ಸೀಮಿತರಾಗದೇ ಸಮಾಜಮುಖಿಗಳಾಗಿ ಕೆಲಸ ಮಾಡಬೇಕು ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಸಲಹೆ ಮಾಡಿದರು.
ಅವರು ಯುವ ಕಾಂಗ್ರೇಸ್ ವಿಧಾನಸಭಾ ಕ್ಷೇತ್ರ ಸಮಿತಿ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಇಲ್ಲಿನ ಪಂಪಾನಗರದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವ ಕಾಂಗ್ರೇಸ್ ಕಾರ್ಯಕರ್ತರು ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಅದರ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಬೇಕು, ದೀನರು, ದಲಿತರು, ಬಡವರು ಮತ್ತು ಅಸಹಾಯಕರ ಸೇವೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಬಡವರು ಮತ್ತು ಸರ್ಕಾರದ ಕೊಂಡಿಯಾಗಿ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‍ಕುಮಾರ್ ಮಾತನಾಡಿ ರೋಗ ಬಂದ ನಂತರ ಪರದಾಡುವ ಬದಲು ಆಗಾಗ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಬರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಬಡಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ಎಲ್ಲೆಡೆ ಆಯೋಜಿಸಬೇಕು ಎಂದು ಹೇಳಿದರು.
ಶಿಬಿರದ ಆಯೋಜಕ ರಾಹಿಲ್ ಷರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಡಜನರಿಗೆ ಆಸ್ಪತ್ರೆಗಳು ಮತ್ತು ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರದಲ್ಲಿ ತಪಾಸಣೆ ಜೊತೆಗೆ ಔಷಧಿಯನ್ನೂ ಉಚಿತವಾಗಿ ನೀಡಲಾಗುತ್ತಿದ್ದು, ತಪಾಸಣೆಗೊಳಗಾದವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ ಅದನ್ನೂ ಉಚಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕಡೂರು ಶರತ್ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಂಡು 163 ಜನರ ನೇತ್ರ ತಪಾಸಣೆ ನಡೆಸಿತು, 28 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ನಗರಸಭೆ ಸದಸ್ಯರಾದ ರೂಬಿನ್ ಮೋಸಸ್, ಸೈಯದ್ ಜಬೀ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ, ಸಿ.ಎನ್.ಅಕ್ಮಲ್, ಶಾದಬ್ ಆಲಂ ಖಾನ್, ಯುವ ಕಾಂಗ್ರೇಸ್ ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಸ್.ಆದಿತ್ಯ, ಜೆ.ವಿನಾಯಕ, ಪ್ರಧಾನ ಕಾರ್ಯದರ್ಶಿ ಸಿ.ಸಿ.ಮಧು, ಜಿ.ಎಂ.ಹರ್ಷವರ್ಧನ ಉಪಸ್ಥಿತರಿದ್ದರು.







