ಶಿಕ್ಷಣದಲ್ಲಿ ಶ್ರದ್ಧೆ-ಕುತೂಹಲ ಅಗತ್ಯ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಆ. 6: ಕಲಿಕೆಯಲ್ಲಿ ಶ್ರದ್ಧೆಯ ಜೊತೆಗೆ ಅಧ್ಯಯನ ಕುರಿತು ಕುತೂಹಲ ಇದ್ದಾಗ ಮಾತ್ರ ಶಿಕ್ಷಣದಲ್ಲಿ ಉನ್ನತಮಟ್ಟಕ್ಕೇರಲು ಸಾಧ್ಯ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜಸ್ಥಾನ ಯುವಕ ಸಂಘ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಬುಕ್ ಬ್ಯಾಂಕ್‌ನ 43ನೆ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಶಿಕ್ಷಣ ಅಗತ್ಯ.ದಾನಗಳಲ್ಲಿ ವಿದ್ಯಾದಾನ ಶೇಷ್ಠವಾದದ್ದು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಸಮಾಜ ಮುಂದಾಗಬೇಕು. ಈ ದಿಕ್ಕಿನಲ್ಲಿ ಜೈನ ಸಮುದಾಯ ಒಂದು ಹೆಜ್ಜೆ ಮುಂದೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೈನ ಸಮುದಾಯ ದೇಶದಲ್ಲಿ ಹೆಚ್ಚು ಆರ್ಥಿಕವಾಗಿ ಸದೃಢ ಹಾಗೂ ಕ್ರೀಯಾಶೀಲತೆಯಿಂದ ಕೂಡಿರುವ ಸಮುದಾಯ. ಉದ್ಯಮ ಮತ್ತು ಬ್ಯಾಂಕಿಂಗ್ ವಲಯಗಳಲ್ಲಿ ಅರ್ಧದಷ್ಟು ಪಾಲು ಹೊಂದಿರುವ ಮಾರ್ವಾಡಿ ಸಮುದಾಯದವರು ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಸಮುದಾಯ ದಾನ, ದೀಕ್ಷೆಗಳು ಇತರೆ ಸಮುದಾಯಗಳಿಗೆ ಆದರ್ಶವಾಗಿವೆ ಎಂದು ಹೇಳಿದರು.
ಬುಕ್ ಬ್ಯಾಂಕ್‌ನ ಅಧ್ಯಕ್ಷ ಪ್ರಸನ್ನ ಪರೇಖ್ ಮಾತನಾಡಿ, ಸಂಘಟನೆಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಐದು ಸಾವಿರ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿಯ ಪಠ್ಯ ಪುಸ್ತಕಗಳ ಸೆಟ್‌ಗಳನ್ನು ವಿತರಿಸಲಾಗುತ್ತಿದೆ. 250 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಇದರ ಜೊತೆಯಲ್ಲಿ 60 ಕಂಪ್ಯೂಟರ್, 10 ಆರ್ ಓ ಮಿನರಲ್ ವಾಟರ್ ಫ್ಲಾಂಟ್‌ಗಳನ್ನು ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ಕುಲಪತಿ ಡಾ.ರಮೇಶ್, ರಾಜಸ್ಥಾನ ಯುವ ಸಂಘದ ಅಧ್ಯಕ್ಷ ರಾಜೇಶ್‌ಪಿ.ಶಾ, ಬೆಂಗಳೂರು ವಿವಿಯ ವಾಣಿಜ್ಯ ವಿಭಾಗದ ಡೀನ್ ಡಾ.ಮುನಿನಾರಾಯಣಪ್ಪ, ವಿಭಾಗ ಮುಖ್ಯಸ್ಥ ಡಾ.ಮುನಿರಾಜ್, ಜೈನ ಮುನಿ ವಿಶಾಲ್ ಸೇರಿದಂತೆ ಇತರರು ಇದ್ದರು.







