ರಾಹುಲ್ ಕಾರಿನ ಮೇಲೆ ದಾಳಿ ಪ್ರಕರಣ: ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ

ಅಹ್ಮದಾಬಾದ್,ಆ.6: ಬನಾಸಕಾಂತಾ ಜಿಲ್ಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಕಾರಿನ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಈ ಮೂವರು ಆರೋಪಿಗಳನ್ನು ಭಗವಾನದಾಸ್ ಪಟೇಲ್, ಮೋರ್ ಸಿಂಗ್ ರಾವ್ ಮತ್ತು ಮುಖೇಶ ಠಕ್ಕರ್ ಎಂದು ಗುರುತಿಸಲಾಗಿದೆ. ಅವರು ಬಿಜೆಪಿಯ ಕಾರ್ಯಕರ್ತ ರಾಗಿದ್ದು, ದಾಳಿಯ ಸಂಚುಕೋರರಲ್ಲಿ ಸೇರಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸಿಗರು ಹೇಳಿದ್ದಾರೆ.
ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಯುವಮೋರ್ಚಾದ ಪದಾಧಿಕಾರಿ ಜಯೇಶ ದರ್ಜಿ ಎಂಬಾತನನ್ನು ಶನಿವಾರ ಬನಾಸಕಾಂತಾದಲ್ಲಿ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಇತರ ಮೂವರಿಗಾಗಿ ಶೋಧ ಕಾರ್ಯಚರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ರಾಹುಲ್ ಶುಕ್ರವಾರ ಪ್ರವಾಹ ಪೀಡಿತ ಬನಾಸಕಾಂತಾ ಜಿಲ್ಲೆಗೆ ಭೇಟಿ ನೀಡಿದ್ದಾಗ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಕಾರಿನ ಹಿಂಬದಿಯ ಗಾಜು ಹುಡಿಯಾಗಿದ್ದು, ರಾಹುಲ್ ಸುರಕ್ಷಿತವಾಗಿ ಪಾರಾಗಿದ್ದರು.
ಈ ಘಟನೆ ಕಾಂಗ್ರೆಸಿಗರ ತೀವ್ರ ಪ್ರತಿಭಟನೆಗೆ ಕಾರಣವಗಿತ್ತು.





