ಅಕ್ಟೋಬರ್ ಅಂತ್ಯದಲ್ಲಿ ಹಾವೇರಿ-ಹುಬ್ಬಳ್ಳಿ ನಡುವೆ ಜೆಡಿಎಸ್ ಬೃಹತ್ ಸಮಾವೇಶ : ಮಧು ಬಂಗಾರಪ್ಪ

ಚಿಕ್ಕಮಗಳೂರು, ಆ.6: ವರಿಷ್ಠರ ಸಲಹೆ ಸೂಚನೆ ಮೇರೆಗೆ ಅಕ್ಟೋಬರ್ ಅಂತ್ಯದಲ್ಲಿ ಹಾವೇರಿ ಮತ್ತು ಹುಬ್ಬಳ್ಳಿ ನಡುವಿನ ಜಿಲ್ಲೆಯಲ್ಲಿ 5 ಲಕ್ಷ ಜನರನ್ನು ಸೇರಿಸಿ ಜೆಡಿಎಸ್ ಬೃಹತ್ ಸಮಾವೇಶ ಮಾಡಲಾಗುತ್ತದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಅವರು ಭಾನುವಾರ ತಾಲೂಕಿನ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಅಂಬಳೆ ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಮಟ್ಟದಲ್ಲಿ ಎಲ್ಲಾ 30 ಜಿಲ್ಲೆಗಳಲ್ಲೂ ಯುವ ಸಮಾವೇಶವನ್ನು ಮಾಡಲಾಗುತ್ತಿದ್ದು ಎರಡು ಜಿಲ್ಲೆಗಳಲ್ಲಿ ಪೂರ್ಣಗೊಂಡಿದೆ. ರಾಜ್ಯದಲ್ಲಿ ಜಾತ್ಯತೀತವಾದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಜನರೆ ಶಕ್ತಿ ತುಂಬಬೇಕು. ಅದರಿಂದ ಯುವ ಜನತೆಯ ಶಕ್ತಿ ಅಗತ್ಯ ಎಂದು ತಿಳಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಸೂಚನೆ ನೀಡಿ ಪಕ್ಷದಿಂದ ಆದೇಶ ಬಂದಿದೆ. ಅಕ್ಟೋಬರ್‍ನಲ್ಲಿ ನಡೆಯುವ ಸಮಾವೇಶದಲ್ಲಿ ಬಾಗವಹಿಸುವಂತೆ ಹೇಳಿದರು.
ನನ್ನ ತಂದೆ ಬಂಗಾರಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅನುಷ್ಠಾನ ಗೊಂಡ ಬಡವರಪರ ಹತ್ತು ಹಲವು ಯೋಜನೆಗಳು ಅವರು ಇಲ್ಲದಿದ್ದರೂ ರಾಜ್ಯದ ಜನರ ಹೃದಯದಲ್ಲಿ ಶಾಸ್ವತವಾಗಿ ನೆಲೆಯೂರಿದೆ ಎಂಬ ಭಾವನೆ ನನ್ನಲ್ಲಿದೆ. ಹಾಗಾಗಿ ನಿಮ್ಮಂತಹ ಪುಣ್ಯಾತ್ಮರ ವಿಶ್ವಾಸ ಹೊಂದಿದ್ದೇನೆ. ಇಂದು ಜೆಡಿಎಸ್ ಪಕ್ಷ ನನ್ನನ್ನು ಬೆಳೆಸಿದೆ ತಂದೆ ಇಲ್ಲದ ಸಂದರ್ಭ ಕುಮಾರಸ್ವಾಮಿ ಅಣ್ಣನಾಗಿ ಮತ್ತು ದೇವೇಗೌಡರು ತಂದೆಯ ರೀತಿ ಆಶೀರ್ವಾದ ಮಾಡುತ್ತಿರುವುದು ಹಾಗೂ ಕಾರ್ಯಕರ್ತರ ಬೆಂಬಲ ಇರುವುದನ್ನು ಎಂದೂ ಕೂಡ ಮರೆಯಲು ಸಾಧ್ಯವಿಲ್ಲ ಎಂದರು.
ಅಣ್ಣಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದಾಕ್ಷಣ ಆ ಜಾಗ ಖಾಲಿಯಾಯ್ತು ಎಂದು ಕೆಲವು ಮಾಧ್ಯಮಗಳಲ್ಲಿ ನನ್ನ ಹೆಸರನ್ನು ಸೇರಿಸಿದರು .ಫಿಲಪ್ ದ ಬ್ಲಾಂಕ್ ಲೀಡರ್ ನಾನಲ್ಲ ಎಂದು ಹೇಳಿ ,ಯಾವುದೇ ಪಕ್ಷದಲ್ಲಿ ಹುದ್ದೆ ಖಾಲಿಯಾದಾಗ ಅಲ್ಲಿ ನನ್ನನ್ನು ಕೂರಿಸಬಹುದು ಎನ್ನುವ ಮಧು ನಾನಲ್ಲ, ಬಂಗಾರಪ್ಪನವರ ಮಗ ಮಧು ನಾನು ಎಂದು ಹೇಳಿ ಒಳ್ಳೆಯ ರೀತಿಯಲ್ಲಿ ವೈಯುಕ್ತಿಕ ಹಾಗೂ ಪಕ್ಷದ ಶಕ್ತಿಯನ್ನು ಬೆಳೆಸಿಕೊಂಡು ಬಂದಿದ್ದೆನೆ ಎಂದು ನುಡಿದರು.







