ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಆ.13 ರಂದು ಧರಣಿ

ಚಾಮರಾಜನಗರ, ಆ. 6: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಸೇತುವೆಯಂತ್ತಿರುವ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ಆಗಷ್ಟ್ 13 ರಂದು ಚಾಮರಾಜನಗರ ರೈಲ್ವೆ ನಿಲ್ದಾಣದಲ್ಲಿ ಚಾಪೆ ಹಾಸಿಕೊಂಡು ಮಲಗಿ ಪ್ರತಿಭಟನೆ ನಡೆಸುವುದಾಗಿ ವಾಟಾಳ್ ನಾಗರಾಜ್ ಹೇಳಿದರು.
ವಾ.ಓ: ಚಾಮರಾಜನಗರ ರೈಲ್ವೆ ನಿಲ್ದಾಣದ ವ್ಯವಸ್ಥೆಗಳನ್ನು ವೀಕ್ಷಿಸಿದ ವಾಟಾಳ್‍ನಾಗರಾಜ್, ಪ್ಲಾಟ್‍ಫಾರಂ ನಲ್ಲಿ ಸುತ್ತಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ರೈಲ್ವೆ ಇಲಾಖೆ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಚಾಮರಾಜನಗರ ಜಿಲ್ಲೆ ಮೂರು ರಾಜ್ಯಗಳ ಸಂಪರ್ಕ ಇರುವ ಜಿಲ್ಲೆಯಾಗಿದ್ದು, ಇಲ್ಲಿಂದ ಕೇರಳ ಮತ್ತು ತಮಿಳುನಾಡಿಗೆ ರೈಲ್ವೆ ಮಾರ್ಗ ಕಲ್ಪಿಸಿದಾಗ ಉತ್ತಮವಾಗಿರುತ್ತದೆ ಎಂದು ಹೇಳಿದ ವಾಟಾಳ್ ನಾಗರಾಜ್, ನಾಮಕಾವಸ್ತೆಯಂತೆ ಸರ್ವೆ ಮಾಡಿದ್ದಾರೆ ಆದರೆ ಇನ್ನೂ ಜಾರಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಲೋಕಸಭಾ ಸದಸ್ಯರು ರಾಜ್ಯದ ರೈಲ್ವೆ ಯೋಜನೆಗಳನ್ನು ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ಚಕಾರ ಎತ್ತದೇ ಇರುವುದು ಅನುಮಾನ ಮೂಡಿಸಿದೆ ಈ ಹಿನ್ನಲೆಯಲ್ಲಿ ಚಾಮರಾಜನಗರ ಮೆಟ್ಟುಪಾಳ್ಯಂ ಹಾಗೂ ಬೆಂಗಳೂರು ಕನಕಪುರ ಮಾರ್ಗವಾಗಿ ಚಾಮರಾಜನಗರ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಇದೇ 13 ರಂದು ರೈಲ್ವೆ ನಿಲ್ದಾಣದ ಮುಂದೆ ಚಾಪೆ ಹಾಸಿ ಮಲಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಗೋವಾ ಸರ್ಕಾರವು ಉತ್ತರ ಕರ್ನಾಟಕಕ್ಕೆ ಕಳಸ ಬಂಡೂರಿಗೆ ನೀರು ಹರಿಸುವುದಿಲ್ಲ ಎಂದು ಹೇಳುತ್ತಿದೆ ಇದು ಸರಿಯಾದ ಕ್ರಮವಲ್ಲ, ಉತ್ತರ ಕರ್ನಾಟಕ ಜನತೆಯ ಪರವಾಗಿ ಕನ್ನಡ ಸಂಘಟನೆಗಳು ಇದೆ ಹಾಗೂ ಈ ಬಗ್ಗೆ ಕಾರ್ಯ ರೂಪಿಸುವ ಸಲುವಾಗಿ ಇದೇ 12 ರಂದು ಕನ್ನಡ ಸಂಘಟನೆಗಳ ಸಮ್ಮೇಳನ ಹಮ್ಮಿಕೊಂಡಿದ್ದು, ಅಲ್ಲಿ ನಿರ್ಣಯ ಕೈಗೊಂಡು, ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಹೋಗುವ ಎಲ್ಲಾ ಸೌಲಬ್ಯಗಳನ್ನು ಬಂದ್ ಮಾಡುವುದಲ್ಲದೇ ಹೋರಾಟ ಉಗ್ರ ಸ್ವರೂಪಕ್ಕೆ ಕೊಂಡೊಯ್ಯುವುದಾಗಿ ಹೇಳಿದರು.
ಚಾಮರಾಜನಗರದ ಜೋಡಿ ರಸ್ತೆ ಮಾಡಿದ್ದು ನಾನು ಅದು ಜಿಲ್ಲೆಯಾಗುವ ಮೊದಲೇ, ಕ್ರೀಡಾಂಗಣ ಮಾಡಿದ್ದು ನಾನೇ, ಅದೂ ಕೂಡ ಜಿಲ್ಲಾಯಾಗುವುದಕ್ಕೂ ಮೊದಲೇ, ಅದೇ ರೀತಿ ಕಾವೇರಿ ನದಿಯಿಂದ ನೀರು ತಂದಿದ್ದು ನಾನೇ ಎಂದು ಹೇಳಿಕೊಂಡ ವಾಟಾಳ್ ನಾಗರಾಜ್, ಗಡಿ ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಮುಖ್ಯಮಂತ್ರಿಗಳು ಐದು ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದಾಗ ಮಾತ್ರ ಜಿಲ್ಲೆ ಸಮಗ್ರ ಅಭಿವೃದ್ದಿಯಾಗಲಿದೆ ಎಂದರು.







