ಯಾರನ್ನಾದರೂ ಟೀಕಿಸುವ ಪ್ರತ್ಯೇಕ ಹಕ್ಕು ಮಾಧ್ಯಮಗಳಿಗಿಲ್ಲ: ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ,ಆ.6: ನಾಗರಿಕರಿಗೆ ಮಾನಹಾನಿಗೆ ಕಾರಣವಾಗುವ ಟೀಕೆಗಳು ಅಥವಾ ಆರೋಪಗಳನ್ನು ಮಾಡುವ ಯಾವುದೇ ಪ್ರತ್ಯೇಕ ಅಥವಾ ವಿಶೇಷ ಹಕ್ಕು ಮಾಧ್ಯಮ ಗಳಿಗೆ ಇಲ್ಲ ಎಂದು ಇಲ್ಲಿಯ ಹೆಚ್ಚುವರಿ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಅಲ್ಲದೆ, ಪತ್ರಕರ್ತರು ಇತರರಿಗಿಂತ ಹೆಚ್ಚಿನ ಸ್ವಾತಂತ್ರವನ್ನು ಹೊಂದಿಲ್ಲ ಎಂದಿರುವ ಅದು, ಪತ್ರಕರ್ತರು ಮಾಹಿತಿಯನ್ನು ಪ್ರಸಾರ ಮಾಡುವ ಅಧಿಕಾರ ಹೊಂದಿರುವುದರಿಂದ ಅವರ ಹೊಣೆಗಾರಿಕೆಯು ಹೆಚ್ಚಿನದಾಗಿದೆ ಎಂದು ನೆನಪಿಸಿದೆ.
ತನ್ನ ಮಾನಹಾನಿಯನ್ನುಂಟು ಮಾಡಲಾಗಿದೆ ಎಂದು ಆರೋಪಿರುವ ವ್ಯಕ್ತಿಯ ವಿರುದ್ಧ ಯಾವುದೇ ಮಾನಹಾನಿಕರ ವರದಿಗಳನ್ನು ಪ್ರಕಟಿಸದಂತೆ ಮ್ಯಾಗಝಿನ್‌ವೊಂದರ ಸಂಪಾದಕರನ್ನು ನಿರ್ಬಂಧಿಸಿದ ನ್ಯಾ.ರಾಜ್ ಕಪೂರ್ ಅವರು, ದೂರುದಾರನಿಗೆ ‘ಸಾಂಕೇತಿಕ ಪರಿಹಾರ’ವಾಗಿ 30,000 ರೂ. ಮತ್ತು 20,000 ರೂ.ಗಳನ್ನು ಪಾವತಿಸುವಂತೆ ಅನುಕ್ರಮವಾಗಿ ಸಂಪಾದಕರು ಮತ್ತು ಇನ್ನೋರ್ವ ವ್ಯಕ್ತಿಗೆ ಆದೇಶಿಸಿದರು.
ಯಾರನ್ನೇ ಆದರೂ ಟೀಕಿಸುವ ಅಥವಾ ಯಾವುದೇ ಪ್ರಕರಣದ ಬಗ್ಗೆ ತನಿಖೆ ನಡೆಸುವ ಪ್ರತ್ಯೇಕ ಹಕ್ಕನ್ನು ಮಾಧ್ಯಮಗಳು ಹೊಂದಿಲ್ಲ. ವಾಸ್ತವದಲ್ಲಿ ಪತ್ರಕರ್ತರ ಹೊಣೆಗಾರಿಕೆ ಶ್ರೀಸಾಮಾನ್ಯರಿಗಿಂತ ಹೆಚ್ಚಿದೆ ಎಂದು ಅವರು ಹೇಳಿದರು.
ತನ್ನ ಹೆಸರಿಗೆ ಮಸಿ ಬಳಿಯಲು ಅವಮಾನಕಾರಿ ಶಬ್ದಗಳಿಂದ ಕೂಡಿದ ವರದಿಯೊಂದು 2007, ಡಿಸೆಂಬರ್‌ನಲ್ಲಿ ಮ್ಯಾಗಝಿನ್‌ನಲ್ಲಿ ಪ್ರಕಟಗೊಂಡಿತ್ತು. ಪ್ರತಿವಾದಿಗಳಿಗೆ ತಾನು ಕಾನೂನು ನೋಟಿಸ್‌ನ್ನು ಜಾರಿಗೊಳಿಸಿದ್ದೆ,ಆದರೆ ಕ್ಷಮೆ ಕೋರು ವ ಬದಲು ತನ್ನ ವಿರುದ್ಧ ಅವಮಾನಕಾರಿ ಶಬ್ದಗಳನ್ನೊಳಗೊಂಡಿದ್ದ ಪತ್ರಗಳನ್ನು ಸರಕಾರಿ ಏಜೆನ್ಸಿಗಳಿಗೆ ಬರೆದು ಮತ್ತೆ ಮಾನಹಾನಿಯನ್ನುಂಟು ಮಾಡಿದ್ದರು ಎಂದು ಶೇರ್ ಬ್ರೋಕರ್ ಹಾಗು ಹೌಸಿಂಗ್ ಸೊಸೈಟಿಯೊಂದರ ಸದಸ್ಯರಾಗಿರುವ ದೂರುದಾರರು ಆರೋಪಿಸಿದ್ದರು.
ಎರಡನೇ ಪ್ರತಿವಾದಿ ಹಾಗೂ ಆಗ ಸೊಸೈಟಿಯ ಅಧ್ಯಕ್ಷನಾಗಿದ್ದ ವ್ಯಕ್ತಿ, ದೂರುದಾರ (ಶೇರ್ ಬ್ರೋಕರ್)ರು ಸೊಸ್ಯೆಟಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು ಮತ್ತು ಅಲ್ಲಿಯ ಅನಧಿಕೃತ ಅತಿಕ್ರಮಣವನ್ನು ತೆರವುಗೊಳಿಸಲು ತಾನು ಸಿವಿಲ್ ದಾವೆಯನ್ನು ಹೂಡಿದ್ದೇನೆ ಎಂದು ಆರೋಪಿಸಿದ್ದ.
ಆದರೆ, ಇಬ್ಬರೂ ಪ್ರತಿವಾದಿಗಳು ಪರಸ್ಪರ ಶಾಮೀಲಾಗಿ ಮಾನಹಾನಿಕರ ವರದಿ ಯನ್ನು ಮ್ಯಾಗಝಿನ್‌ನಲ್ಲಿ ಪ್ರಕಟಿಸಿದ್ದರು ಮತ್ತು ತನ್ಮೂಲಕ ವ್ಯಕ್ತಿಯ ಮಾನನಷ್ಟಕ್ಕೆ ಕಾರಣ ರಾಗಿದ್ದರು ಎಂದು ನ್ಯಾಯಾಲಯವು ಹೇಳಿತು.







