ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪರ ವಿವಾದಾತ್ಮಕ ಟ್ವೀಟ್ ಮಾಡಿದ ನಟ ಜಗ್ಗೇಶ್
ಕನ್ನಡಪರ ಸಂಘಟನೆಗಳ ಆಕ್ರೋಶ

ಬೆಂಗಳೂರು, ಆ.6: ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಪರ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಮಾಡಿರುವ ಟ್ವೀಟ್ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಕನ್ನಡಿಗರ ಆಕ್ರೋಶಕ್ಕೂ ಗುರಿಯಾಗಿದೆ.
ರವಿವಾರ ನಟ ಜಗ್ಗೇಶ್ ಅವರು ತಮ್ಮ ಟ್ವೀಟ್‌ನಲ್ಲಿ ಭಾಷಾ ತಾರತಮ್ಯದ ಹಿನ್ನೆಲೆಯಲ್ಲಿ ವೆಂಕಯ್ಯನಾಯ್ಡು ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಲು ವಿರೋಧಿಸಲಾಗಿತ್ತು. ಆದರೆ, ಇಂದು ಅವರು ಭಾರತದ ಉಪ ರಾಷ್ಟ್ರಪತಿಯಾಗಿದ್ದಾರೆ. ‘ಬಾರದು ಬಪ್ಪುದು, ಬಪ್ಪುದು ತಪ್ಪದು’. ಇದೇ ದೇವರ ಲೀಲೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಆದರೆ, ಜಗ್ಗೇಶ್ ಅವರ ಈ ಟ್ವೀಟ್‌ಗೆ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಜಗ್ಗೇಶ್ ತಮ್ಮ ವಿವಾದಿತ ಟ್ವೀಟ್‌ನ್ನು ತೆಗೆದು ಹಾಕಿದ್ದಾರೆ. ಅಲ್ಲದೆ, ಇದೀಗ ಜಗ್ಗೇಶ್ ಅವರು ಪರೋಕ್ಷವಾಗಿ ಕನ್ನಡಿಗರಿಗೆ ಅಪಮಾನವಾಗುವ ರೀತಿ ಟ್ವೀಟ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ವಿರೋಧ ಏಕೆ?: ರಾಜ್ಯಸಭೆಯ ಚುನಾವಣೆ ವೇಳೆ ಬಿಜೆಪಿ ಈ ಬಾರಿ ಮತ್ತೊಮ್ಮೆ ಕರ್ನಾಟಕದಿಂದ ವೆಂಕಯ್ಯನಾಯ್ಡು ಅವರನ್ನು ಕಳುಹಿಸಲು ಮುಂದಾಗಿತ್ತು. ಆದರೆ, ಈ ಹಿಂದೆ ಎರಡೂ ಬಾರಿ ರಾಜ್ಯದಿಂದ ಆಯ್ಕೆ ಆಗಿದ್ದರೂ ರಾಜ್ಯಕ್ಕೆ ಏನು ಕೆಲಸ ಮಾಡಿಲ್ಲ ಎಂದು ಕನ್ನಡಿಗರು ಮತ್ತೊಮ್ಮೆ ಆರಿಸಿ ಕಳುಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ‘ವೆಂಕಯ್ಯ-ಸಾಕಯ್ಯ’ ಎಂಬ ಅಭಿಯಾನ ನಡೆಸಿದ್ದರು.
ಈ ವೇಳೆ ಕನ್ನಡಪರ ಧ್ವನಿ ಎತ್ತದೆ, ಕನ್ನಡ ಪರ ಕೆಲಸ ಮಾಡದ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ವೇಳೆ ವೆಂಕಯ್ಯನಾಯ್ಡುಗೆ ರಾಜ್ಯಸಭೆ ಟಿಕೆಟ್‌ಗೆ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ರಾಜ್ಯದ ಜನರ ಅಭಿಪ್ರಾಯಕ್ಕೆ ಬಿಜೆಪಿ ಮಣಿದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಿದರೆ, ವೆಂಕಯ್ಯ ನಾಯ್ಡು ಅವರಿಗೆ ರಾಜಸ್ಥಾನದಲ್ಲಿ ಟಿಕೆಟ್ ನೀಡಿತ್ತು. ಈ ವಿಚಾರವನ್ನು ನೆನಪಿಸಿಕೊಂಡು ನಟ ಜಗ್ಗೇಶ್ ಈ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.







