ಹಲ್ಲೆ, ಕೊಲೆ ಖಂಡಿಸಿ ಸಹಿ ಸಂಗ್ರಹ
ಬೆಂಗಳೂರು, ಆ.6: ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತೀರುವ ಹಲ್ಲೆ, ಕೊಲೆಗಳನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವತಿಯಿಂದ ಸಹಿ ಸಂಗ್ರಹ ಮಾಡಲಾಯಿತು.
ರವಿವಾರ ನಗರದ ಬ್ರಿಗೇಡ್, ಎಂ.ಜಿ.ರಸ್ತೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೂರಾರು ಸದಸ್ಯರು ದೇಶದಾದ್ಯಂತ ನಡೆಯುತ್ತಿರುವ ಗುಂಪು ಹತ್ಯೆಗಳನ್ನು ಖಂಡಿಸಿ, ಸಹಿ ಸಂಗ್ರಹ ಮತ್ತು ಭಿತ್ತಿ ಪತ್ರವನ್ನು ಪ್ರದರ್ಶಿಸಿ, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಹಿ ಸಂಗ್ರಹ ಕುರಿತು ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಮುಸ್ಸವೀರ್, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದರೂ, ಇವುಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಗೋರಕ್ಷಣೆ ಮೇಲಿರುವ ಕಪಟ ಪ್ರೀತಿಯನ್ನು ಆಧಾರವಾಗಿಟ್ಟುಕೊಂಡು ಮನುಷ್ಯರನ್ನು ದ್ವೇಷಿಸುವುದು, ಹಿಂಸಿಸುವುದು ಮತ್ತು ಕೊಲೆಗೈಯುತ್ತಿರುವುದು ದೇಶದಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ಗೋಕಳ್ಳತನ ಹೆಸರಿನಲ್ಲಿ ಗೋರಕ್ಷಿಸಲು ದೇಶದಾದ್ಯಂತ ಗುಂಡಾಗಿರಿ ಹೆಚ್ಚಾಗಿರುವುದರಿಂದ ದೇಶದ ಬೆನ್ನೆಲುಬಾಗಿರುವ ರೈತರನ್ನು ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಸಹಿ ಸಂಗ್ರಹ ವೇಳೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಸುಫಿಯಾನ್ ಮಡಿಕೇರಿ, ಬೆಂ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೀಫ್ ಸೇರಿ ಪ್ರಮುಖರು ಹಾಜರಿದ್ದರು.







