ಕಾಲುವೆಗಳಿಗೆ ನೀರು ಹರಿಸಲು ಸಂಸದ ಪುಟ್ಟರಾಜು ಒತ್ತಾಯ
ಮಂಡ್ಯ, ಆ,6: ಕೆಆರ್‌ಎಸ್, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಿಂದ ತಕ್ಷಣ ಕಾಲುವೆಗಳಿಗೆ ನೀರು ಹರಿಸುವಂತೆ ಸಂಸದ ಸಿ.ಎಸ್.ಪುಟ್ಟರಾಜು ಒತ್ತಾಯಿಸಿದ್ದಾರೆ.
ರವಿವಾರ ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 9ರಂದು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿದ್ದು, ಮೊದಲೇ ನೀರು ಬಿಡುಗಡೆ ಮಾಡಬೇಕು ಎಂದರು. ಮಳೆ ಇಲ್ಲದೆ ಕೆರೆಕಟ್ಟೆಗಳು ಒಣಗಿ ಹೋಗಿವೆ. ಜನಜಾನುವಾರುಗಳು ನೀರಿಗೆ ಪರದಾಡುವಂತಾಗಿದೆ. ಆದರೂ ಸರಕಾರ ನಾಲೆಗಳಿಗೆ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಕಿಡಿಕಾರಿದರು.
ದೇವೇಗೌಡರು ಕೇವಲ ಹಾಸನ ಜಿಲ್ಲೆಗೆ ಮಾತ್ರ ನೀರು ಕೇಳುತ್ತಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ಬಂದಿರುವುದು ಅವಾಸ್ತವ. ದೇವೇಗೌಡರು ಕಾವೇರಿ ಕೊಳ್ಳದ ಎಲ್ಲ ನಾಲೆಗಳಿಗೂ ನೀರು ಬಿಡಲು ಹೋರಾಟ ನಡೆಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ತಾಲೂಕಿನ ಸೆಣಬ ಗ್ರಾಮದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ನೀಡುತ್ತೇನೆ. ಕೆರೆ ತೊಣ್ಣೂರು ಆದರ್ಶ ಗ್ರಾಮ ಯೋಜನೆಯಡಿಸ ಅಭಿವೃದ್ಧಿಪಡಿಸಿದ್ದೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 38 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದವರು ಹೇಳಿಕೊಂಡರು.
ಕೆಲವು ಕಾರ್ಯಕ್ರಮಗಳಿಗೆ ತನ್ನನ್ನು ಆಹ್ವಾನಿಸಿಲ್ಲವೆಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಆರೋಪಿಸಿದ್ದಾರೆ. ಶಿಷ್ಟಾಚಾರ ಪಾಲಿಸಬೇಕಾದವರು ಸಂಬಂಧಿಸಿದ ಅಧಿಕಾರಿಗಳು. ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಸೋಮಶೇಖರ್, ಗಿರೀಶ್ ಹಾಗು ಮುಖಂಡ ರಾಮಕೃಷ್ಣ ಉಪಸ್ಥಿತರಿದ್ದರು.







