ಉ.ಕೊರಿಯ ವಿರುದ್ಧ ವಿಶ್ವಸಂಸ್ಥೆ ನಿರ್ಬಂಧ ಇನ್ನಷ್ಟು ಕಠಿಣ
►ಖಂಡಾಂತರ ಕ್ಷಿಪಣಿ ಪರೀಕ್ಷೆ ವಿರುದ್ಧ ಕ್ರಮ ►ವಿವಿಧ ರಫ್ತು ಉತ್ಪನ್ನಗಳಿಗೆ ನಿಷೇಧ

ವಿಶ್ವಸಂಸ್ಥೆ,ಆ.6: ಉತ್ತರ ಕೊರಿಯ ವಿರುದ್ಧದ ಆರ್ಥಿಕ ನಿರ್ಬಂಧಗಳನ್ನು ಕಠಿಣಗೊಳಿಸುವ ಅಮೆರಿಕದ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯು ಅಂಗೀಕರಿಸಿದೆ.
ಉತ್ತರ ಕೊರಿಯವು ಅಮೆರಿಕವನ್ನು ಗುರಿಯಿರಿಸುವ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿರುವುದಕ್ಕಾಗಿ ಈ ಕಠಿಣವಾದ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗಿದೆಯೆಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.
ಉತ್ತರ ಕೊರಿಯವು ಕಲ್ಲಿದ್ದಲು, ಕಬ್ಬಿಣ ಹಾಗೂ ಕಬ್ಬಿಣದ ಆದಿರು, ಸೀಸ ಹಾಗೂ ಸೀಸದ ಆದಿರು, ಮೀನು ಹಾಗೂ ಸಾಗರೋತ್ಪನ್ನಗಳನ್ನು ರಫ್ತು ಮಾಡುವುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ ನಿರ್ಣಯವು ನಿಷೇಧಿಸಿದೆ. ಇವು ಉತ್ತರ ಕೊರಿಯದ ಒಟ್ಟು 3 ಶತಕೋಟಿ ಡಾಲರ್ ರಫ್ತು ಆದಾಯದ ಮೂರನೇ ಒಂದು ಭಾಗದಷ್ಟಾಗಿದೆ.
ಉತ್ತರ ಕೊರಿಯವು ಉದ್ಯೋಗಗಳಿಗಾಗಿ ವಿದೇಶಕ್ಕೆ ಕಳುಹಿಸುವ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವುದನ್ನು ಕೂಡಾ ಈ ನಿರ್ಣಯವು ನಿರ್ಬಂಧಿಸಿದೆ. ಉತ್ತರ ಕೊರಿಯದ ಕಂಪೆನಿಗಳ ಜೊತೆ ಹೊಸ ಜಂಟಿ ಉದ್ಯಮಗಳ ಸ್ಥಾಪನೆಯನ್ನು ನಿರ್ಣಯ ನಿಷೇಧಿಸುತ್ತದೆ. ಇದರ ಜೊತೆಗೆ ನಿರ್ಣಯವು ಉತ್ತರ ಕೊರಿಯದ ಒಂಭತ್ತು ಮಂದಿ ಉನ್ನತ ಅಧಿಕಾರಿಗಳು ಹಾಗೂ ವಿದೇಶಿ ವಿನಿಮಯ ಬ್ಯಾಂಕ್ ಸಹಿತ ನಾಲ್ಕು ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಜುಲೈ 4ರಂದು ಉತ್ತರ ಕೊರಿಯ ತನ್ನ ಪ್ರಪ್ರಥಮ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿದ ಬಳಿಕ ಆ ದೇಶದ ವಿರುದ್ದ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವ ಪ್ರಯತ್ನವಾಗಿ ಅಮೆರಿಕವು ಚೀನಾದೊಂದಿಗೆ ಒಂದು ತಿಂಗಳ ಹಿಂದೆ ಮಾತುಕತೆಯನ್ನು ಆರಂಭಿಸಿತ್ತು. ಆನಂತರ ಜುಲೈ 28ರಂದು ಉತ್ತರ ಕೊರಿಯ ಇನ್ನೊಂದು ಕಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿತ್ತು.
ಉ.ಕೊರಿಯ ಜಾಣ್ಮೆಯಿಂದ ವರ್ತಿಸಲಿ: ಚೀನಾ
ತನ್ನ ವಿವಾದಾತ್ಮಕ ಕ್ಷಿಪಣಿ ಹಾಗೂ ಅಣುಶಕ್ತಿ ಕಾರ್ಯಕ್ರಮಗಳಿಂದಾಗಿ ವಿಶ್ವಸಂಸ್ಥೆಯಿಂದ ಕಠಿಣವಾದ ಆರ್ಥಿಕ ನಿರ್ಬಂಧಗಳಿಗೆ ಒಳಗಾಗಿರುವ ಉತ್ತರ ಕೊರಿಯವು, ‘‘ ಸೂಕ್ತವಾದ ಹಾಗೂ ಜಾಣ್ಮೆಯ ನಿರ್ಧಾರ’’ವನ್ನು ಕೈಗೊಳ್ಳಬೇಕಾಗಿದೆಯೆದಂು ಚೀನಾದ ವಿದೇಶಶಾಂಗ ಸಚಿವ ವಾಂಗ್ ವಿ ಆಗ್ರಹಿಸಿದ್ದಾರೆ.
ವಾಂಗ್ ಎ ಅವರು ಉತ್ತರ ಕೊರಿಯ ವಿರುದ್ಧ ವಿಧಿಸಲಾದ ನಿರ್ಬಂಧಗಳ ಬಗ್ಗೆ ಉತ್ತರ ಕೊರಿಯದ ವಿದೇಶಾಂಗ ಸಚಿವ ರಿ ಹಾಂಗ್ ಯೋ ಜೊತೆ ಚರ್ಚಿಸಿದರೆಂಎಉ ಮೂಲಗಳು ತಿಳಿಸಿವೆ.







