ಪ್ರಧಾನಿ ಮೋದಿ,ಅಮಿತ್ ಶಾಗೆ ಬಳೆ ರವಾನೆ

ಪಣಜಿ, ಆ. 5: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಎರಡು ದಿನಗಳ ಬಳಿಕ, ಕಾಂಗ್ರೆಸ್‌ನ ಗೋವಾ ಮಹಿಳಾ ವಿಭಾಗ, ಘಟನೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಬಳೆಗಳನ್ನು ರವಾನಿಸಲಾಗುವುದು ಎಂದಿದೆ. ಶುಕ್ರವಾರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಿಂದಿರುಗುತ್ತಿದ್ದಾಗ ರಾಹುಲ್ ಗಾಂಧಿ ಕಾರಿನ ಮೇಲೆ ಬನಸ್ಕಾಂತಾದಲ್ಲಿ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಜಯೇಶ್ ದಾರ್ಜಿ ಆಲಿಯಾಸ್ ಅನಿಲ್ ರಾಥೋಡ್‌ನನ್ನು ಪೊಲೀಸರು ನಿನ್ನೆ ಬಂಧಿಸಿದ್ದರು.
ದಾರ್ಜಿ ಬಿಜೆಪಿ ಯುವ ಘಟಕದ ಸ್ಥಳೀಯ ಪದಾಧಿಕಾರಿ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ನಾವು ನಮ್ಮ ಮನೆಯಿಂದ ಸಂಗ್ರಹಿಸಿದ ಬಳೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರಿಗೆ ಕಲ್ಲು ತೂರಿದ ವ್ಯಕ್ತಿಗಳಿಗೆ ಕಳುಹಿಸಲಿದ್ದೇವೆ ಎಂದು ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪ್ರತಿಮಾ ಕುಟಿನ್ಹೋ ತಿಳಿಸಿದ್ದಾರೆ.
ನೆರೆಯಿಂದ ಸಂತ್ರಸ್ತರಾದ ಜನರನ್ನು ಭೇಟಿಯಾಗಿ ಹಿಂದಿರುಗುತ್ತಿದ್ದ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲೆಸೆದಿರುವುದು ಹೇಡಿತನದ ಕೆಲಸ ಎಂದು ಅವರು ಹೇಳಿದ್ದಾರೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಯಾರು ಕೂಡ ಯಾರದೇ ಭಯವಿಲ್ಲದೆ ಎಲ್ಲಿಗೆ ಬೇಕಾದರೂ ಹೋಗಬಹುದು. ದೇಶಕ್ಕಾಗಿ ಜೀವ ನೀಡಿದ ಕುಟುಂಬದ ರಾಹುಲ್ ಗಾಂಧಿ ಇಂತಹ ದಾಳಿಗೆ ಹೆದರಲಾರರು ಎಂಬುದನ್ನು ಬಿಜೆಪಿ ಅರಿತುಕೊಳ್ಳಲಿ ಎಂದರು.







