‘ನವ ಭಾರತ’ದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಪೈಪೋಟಿ ನಡೆಯಲಿದೆ: ಜಾವಡೇಕರ್

ಜೈಪುರ,ಆ.6: ‘ನವ ಭಾರತ’ ದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳು ಪರಸ್ಪರ ಪೈಪೋಟಿ ನಡೆಸಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಹೇಳಿದ್ದಾರೆ.
ಶನಿವಾರ ಇಲ್ಲಿ ರಾಜಸ್ಥಾನ ಸರಕಾರ ಮತ್ತು ದುಬೈ ಮೂಲದ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆ ಜೆಮ್ಸ್ ಎಜ್ಯುಕೇಷನ್ ಏರ್ಪಡಿಸಿದ್ದ ಎರಡು ದಿನಗಳ ‘ಶಿಕ್ಷಣ ಉತ್ಸವ ’ದಲ್ಲಿ ಮಾತನಾಡಿದ ಅವರು, ಮುಂದಿನ ಕೆಲವು ವರ್ಷಗಳಲ್ಲಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆ ಅಥವಾ ಖಾಸಗಿ ಶಾಲೆಗೆ ಸೇರಿಸಬೇಕೇ ಎನ್ನುವುದನ್ನು ನಿರ್ಧರಿಸಲು ಪೋಷಕರಿಗೆ ಕಷ್ಟವಾಗಲಿದೆ. ಇದು ನವಭಾರತದ ಚಿತ್ರಣವಾಗಿದೆ ಎಂದರು.
ಸರಕಾರಿ ಶಾಲೆಗಳಲ್ಲಿ ಪ್ರವೇಶವನ್ನು ಸರಕಾರವು ಹೆಚ್ಚಿಸಿದೆ ಮತ್ತು ಈಗ ಶಿಕ್ಷಣದ ಗುಣಮಟ್ಟದ ಸುಧಾರಣೆ ಹಾಗೂ ಪರೀಕ್ಷಾ ಫಲಿತಾಂಶಗಳ ಬಗ್ಗೆ ಗಮನವನ್ನು ಕೇಂದ್ರೀಕರಿ ಸಲಿದೆ ಎಂದು ಹೇಳಿದ ಅವರು, ಐದು ಮತ್ತು ಎಂಟನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಹಕ್ಕು ಕಾಯ್ದೆಯಡಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿ ಸಬಾರದು ಎಂಬ ನೀತಿಯನ್ನು ಕೈಬಿಡಲಾಗುವದು. ಇದಕ್ಕೆ 24 ರಾಜ್ಯಗಳು ಒಪ್ಪಿಗೆ ನೀಡಿವೆ ಎಂದರು.
ಪ್ರತಿಯೊಂದು ಮಗುವೂ ಭಿನ್ನವಾಗಿರುತ್ತದೆ ಮತ್ತು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಮಗುವಿನ ಸಾಮರ್ಥ್ಯಗಳನ್ನು ತಿಳಿದುಕೊಂಡು ಅದಕ್ಕನುಗುಣವಾಗಿ ಅವಕಾಶಗಳನ್ನು ಒದಗಿಸುವುದು ಉತ್ತಮ ಶಿಕ್ಷಕರ ಕರ್ತವ್ಯವಾಗಿದೆ ಎಂದರು.
ಶಿಕ್ಷಣ ಉತ್ಸವವು ಜ್ಞಾನದ ಸಂಭ್ರಮಾಚರಣೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸರಕಾರವು ತರಲಿರುವ ಸುಧಾರಣೆಗಳ ಪೂರ್ವ ಸೂಚಕವಾಗಿದೆ. ಇಂಜಿನಿಯರ್‌ಗಳು, ವೈದ್ಯರು, ವಕೀಲರು ಇತ್ಯಾದಿ ನಮಗೆ ಅಗತ್ಯವಾಗಿರುವಂತೆ ವಿದ್ಯಾರ್ಥಿಗಳು ಪಡೆಯಲು ಬಯಸುವ ಶಿಕ್ಷಣಕ್ಕೆ ಅವಕಾಶವನ್ನೂ ನಾವು ಒದಗಿಸುವುದು ಅಗತ್ಯವಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ತಿಳಿಸಿದರು.ಸಮಾಜದ ಆರೋಗ್ಯವು ಶಿಕ್ಷಣವನ್ನು ಅವಲಂಬಿಸಿದೆ ಎಂದು ಹೇಳಿದ ಯುಎಇಯ ಸಂಸ್ಕೃತಿ ಮತ್ತು ಜ್ಞಾನಾಭಿವೃದ್ಧಿ ಸಚಿವ ಶೇಖ್ ನಹ್ಯಾನ್ ಮುಬಾರಕ್ ಅಲ್ ನಹ್ಯಾನ್ ಅವರು, ಭಾರತ ಮತ್ತು ಯುಎಇ ನಡುವಿನ ಸಂಬಂಧಗಳು ಸಮಾನ ವೌಲ್ಯಗಳು ಮತ್ತು ಆಕಾಂಕ್ಷೆಗಳು, ವಿಶ್ವಾಸ ಮತ್ತು ನಂಬಿಕೆಗಳಲ್ಲಿ ಆಳವಾಗಿ ಬೇರು ಬಿಟ್ಟಿವೆ. ಇಲ್ಲಿ ನನ್ನ ಉಪಸ್ಥಿತಿಯು ಉಭಯ ದೇಶಗಳ ನಡುವಿನ ಗಾಢ ಸಂಬಂಧಕ್ಕೆ ಪುರಾವೆಯಾಗಿದೆ ಎಂದರು.







