ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೈದಿ ಮೃತ್ಯು
ಮಂಗಳೂರು, ಆ. 6: ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೋರ್ವ ಚಿಕಿತ್ಸೆ ಫಲಿಸದೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಮೂಲತಃ ಸಕಲೇಶಪುರ ಹೆಬ್ಬನಹಳ್ಳಿ ನಿವಾಸಿ ಬಾಬು (55) ಮೃತಪಟ್ಟ ವಿಚಾರಣಾಧೀನ ಕೈದಿ.
ಬಂಟ್ವಾಳದ ವಗ್ಗ ಕಾಡಬೆಟ್ಟು ಬಳಿ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಒಂದುವರೆ ವರ್ಷದ ಹಿಂದೆ ಕೆಲಸದ ನಿಮಿತ್ತ ಮೂಡುಬಿದಿರೆಗೆ ಬಂದಿದ್ದು, ಈ ಸಂದರ್ಭ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿ, ನ್ಯಾಯಾಂಗ ಬಂಧನದಲ್ಲಿದ್ದು, ಜಿಲ್ಲಾ ಕಾರಾಗೃಹದಲ್ಲಿದ್ದ ಹಲವು ಸಮಯದಿಂದ ಹೊಟ್ಟೆನೋವು ಕಾಡುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು.
ಶನಿವಾರ ರಾತ್ರಿ ಮತ್ತೆ ಅನಾರೋಗ್ಯ ಉಲ್ಬಣಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಬೆಳಗ್ಗೆ 4:30ರ ವೇಳೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





