ಕಲ್ಮಾಡಿ ಚರ್ಚಿನ ನೊವೆನಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ, ಆ.6: ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ರವಿವಾರ ಚಾಲನೆ ನೀಡಲಾಯಿತು.
ಪಡುಕೋಣೆ ಸಂತ ಅಂತೋನಿಯವರ ಚರ್ಚಿನ ಧರ್ಮಗುರು ವಂ.ಫ್ರೆಡ್ ಮಸ್ಕರೆನ್ಹಸ್ ನೊವೆನಾ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಆ.15 ರಂದು ಚರ್ಚಿನ ಪ್ರತಿಷ್ಠಾಪನಾ ಮಹೋತ್ಸವ ಜರಗಲಿದ್ದು, 9ದಿನಗಳ ನೊವೆನಾ ಕಾರ್ಯಕ್ರಮದಲ್ಲಿ ಯುವಜನತೆ, ಧಾರ್ಮಿಕ ವ್ಯಕ್ತಿಗಳು, ಅಶಕ್ತರು, ಕ್ರೈಸ್ತ ಕುಟುಂಬಗಳು, ವಿದೇಶದಲ್ಲಿ ನೆಲೆಸಿರುವ ಕ್ರೈಸ್ತ ವಿಶ್ವಾಸಿಗಳು, ದಾನಿಗಳು, ಮದುವೆಯಾದ ದಂಪತಿಗಳು, ಮಕ್ಕಳು ಹಾಗೂ ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಗಳನ್ನು ಸಲ್ಲಿಸಲಾಗುತ್ತದೆ.
ಆ.13ರಂದು ಮಧ್ಯಾಹ್ನ 2.30ಕ್ಕೆ ವೆಲಂಕಣಿ ಮಾತೆಯ ಮೂರ್ತಿಯನ್ನು ಆದಿ ಉಡುಪಿ ಜಂಕ್ಷನ್‌ನಿಂದ ಕಲ್ಮಾಡಿ ಚರ್ಚಿನವರೆಗೆ ಮೆರವಣಿಗೆಯಲ್ಲಿ ತರಲಾಗುತ್ತದೆ. ಬಳಿಕ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ ರೆಕ್ಟರ್ ವಂ.ಜೋರ್ಜ್ ಡಿಸೋಜ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
15ರಂದು ಬೆಳಗ್ಗೆ 10.30ಕ್ಕೆ ಪ್ರತಿಷ್ಠಾಪನಾ ಮಹೋತ್ಸವದ ಪ್ರಧಾನ ಬಲಿ ಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅರ್ಪಿಸಲಿರುವರು. ಅದೇ ದಿನ ಬೆಳಿಗ್ಗೆ 7 ಗಂಟೆಗೆ ಕೊಂಕಣಿ, ಸಂಜೆ 4 ಗಂಟೆಗೆ ಕನ್ನಡ ಹಾಗೂ 6 ಗಂಟೆಗೆ ಇಂಗ್ಲಿಷ್ ಭಾಷೆಯಲ್ಲಿ ಪವಿತ್ರ ಬಲಿಪೂಜೆಯ ನಡೆಯಲಿದೆ.
ನೊವೆನಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ. ಆಲ್ಬನ್ ಡಿಸೋಜ, ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ಮೊದಲಾದವರು ಉಪಸ್ಥಿತರಿದ್ದರು.







