ಅಮೆರಿಕದಿಂದ ಅಣು ಒಪ್ಪಂದ ಭಗ್ನಕ್ಕೆ ಯತ್ನ: ಟ್ರಂಪ್ ವಿರುದ್ಧ ರೂಹಾನಿ ವಾಗ್ದಾಳಿ

ಟೆಹರಾನ್,ಆ.6: ಜಾಗತಿಕ ಶಕ್ತಿಗಳ ಜೊತೆ ಟೆಹ್ರಾನ್ ಅಣುಶಕ್ತಿ ಒಡಂಬಡಿಕೆಯನ್ನು ಹಾಳುಗೆಡವಲು ಅಮೆರಿಕವು ಪ್ರಯತ್ನಿಸುತ್ತಿದೆಯೆಂದು ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ಶನಿವಾರ ಆರೋಪಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಇದು ರಾಜಕೀಯ ಆತ್ಮಹತ್ಯೆಯಾಗಲಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಅಧ್ಯಕ್ಷರಾಗಿ ಎರಡನೆ ಅವಧಿಗೆ ಶನಿವಾರ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಅಣುಶಕ್ತಿ ಒಡಂಬಡಿಕೆಯ ಜಾರಿಗೆ ಅಮೆರಿಕದ ಬದ್ಧತೆಯ ಕೊರತೆಯು ಆ ದೇಶವು ಒಂದು ವಿಶ್ವಾಸಾರ್ಹವಲ್ಲದ ಪಾಲುದಾರನೆಂಬುದನ್ನು ಇಡೀ ಜಗತ್ತಿಗೆ ಸಾಬೀತುಪಡಿಸಿದೆ’’ ಎಂದು ರೂಹಾನಿ ಹೇಳಿದ್ದಾರೆ.
2015ರಲ್ಲಿ ಅಮೆರಿಕ ಹಾಗೂ ವಿಶ್ವದ ಇತರ ಐದು ಪ್ರಮುಖ ರಾಷ್ಟ್ರಗಳ ನಡುವೆ ಏರ್ಪಟ್ಟ ಒಪ್ಪಂದದ ಪ್ರಕಾರ ಇರಾನ್ ತನ್ನ ಅಣುಶಕ್ತಿ ಕಾರ್ಯಕ್ರಮವನ್ನ ನಿರ್ಬಂಧಿಸುವುದಕ್ಕೆ ಪ್ರತಿಯಾಗಿ ಆ ದೇಶದ ವಿರುದ್ಧ ಹೇರಲಾಗಿದ್ದ ಹಲವಾರು ನಿರ್ಬಂಧಗಳನ್ನು ತೆಗೆದುಹಾಕಬೇಕಾಗಿತ್ತು.
ತನ್ನ ಭಾಷಣದಲ್ಲಿ ಟ್ರಂಪ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ರೂಹಾನಿ ಅವರು ಅಣುಶಕ್ತಿ ಒಪ್ಪಂದವನ್ನು ಮುರಿಯಲು ಯತ್ನಿಸುವವರು ಅವರು ತಮ್ಮ ರಾಜಕೀಯ ಬದುಕನ್ನೇ ಚಿಂದಿಚೂರು ಮಾಡಿಕೊಳ್ಳುತ್ತಿದ್ದಾರೆಂಬುದನ್ನು ತಿಳಿದಿರಬೇಕೆಂದು ಹೇಳಿದ್ದಾರೆ.
ಇರಾನ್ ಅಣುಶಕ್ತಿ ಒಪ್ಪಂದದಿಂದ ಮೊದಲು ಹೊರಹೋಗಲಾರದು. ಆದರೆ ಅಮೆರಿಕವು ಒಪ್ಪಂದವನ್ನು ಉಲ್ಲಂಘಿಸಿದಲ್ಲಿ ಅದು ಮೌನವಾಗಿ ಕುಳಿತಿರಲಾರದು ಎಂದು ರೂಹಾನಿ ಹೇಳಿದ್ದಾರೆ.
ಇದಕ್ಕೂ ಮುನ್ನ ಯುರೋಪ್ ಒಕ್ಕೂಟದ ವಿದೇಶಾಂಗ ಮುಖ್ಯಸ್ಥ ಫೆಡೆರಿಕಾ ಮೊಗೆರೆನಿ ಜೊತೆ ಮಾತನಾಡಿದ ರೂಹಾನಿ ಅವರು ಅಮೆರಿಕದ ಉದ್ಧಟತನದ ನಿಲುವಿನಿಂದ ಅಣುಶಕ್ತಿ ಒಪ್ಪಂದಕ್ಕೆ ಧಕ್ಕೆಯುಂಟಾಗುವ ಸಾಧ್ಯತೆಯಿದೆ’’ ಎಂದು ಆತಂಕ ವ್ಯಕ್ತಪಡಿಸಿದ್ದರು.
ಕಾರ್ಯಕ್ರಮದಲ್ಲಿ ಯುರೋಪ್ ಒಕ್ಕೂಟದ ಗಣ್ಯರ ಉಪಸ್ಥಿತಿಯನ್ನು ಪ್ರಶಂಸಿಸಿದ ಅವರು ಟೆಹರಾನ್ ಜೊತೆಗಿನ ಬಾಂಧವ್ಯವನ್ನು ವಿಸ್ತರಿಸಲು ಯುರೋಪ್ ದೃಢನಿರ್ಧಾರ ಮಾಡಿವೆ ಎಂದರು.







