25 ಕೆ.ಜಿ. ಚಿನ್ನ ಕಳ್ಳಸಾಗಣೆ: ಬಾಂಗ್ಲಾ ವಿಮಾನ ನಿಲ್ದಾಣದಲ್ಲಿ ಓರ್ವನ ಬಂಧನ

ಢಾಕಾ, ಆ.6: 25 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆಗೆ ಯತ್ನಿಸಿದ ಗಾಲಿಕುರ್ಚಿಯ ಮೂಲಕ ನಡೆದಾಡುತ್ತಿದ್ದ 48 ವರ್ಷದ ವ್ಯಕ್ತಿಯೊಬ್ಬನನ್ನು ಢಾಕಾದ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಶನಿವಾರ ಬಂಧಿಸಲಾಗಿದೆ. ಬಾಂಗ್ಲಾದಲ್ಲಿ ಈ ವರ್ಷ ಪತ್ತೆಯಾದ ಅತಿ ದೊಡ್ಡ ಪ್ರಮಾಣದ ಚಿನ್ನಕಳ್ಳಸಾಗಣೆ ಪ್ರಕರಣ ಇದಾಗಿದೆಯೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನಕಳ್ಳಸಾಗಣೆ ಆರೋಪಿ ಜಮಿಲ್ ಅಖ್ತರ್ ಶನಿವಾರ ಸಿಂಗಾಪುರದಿಂದ ಢಾಕಾ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದನು. ಗಾಲಿಕುರ್ಚಿಯಲ್ಲಿದ್ದ ಆತ 12.5 ಕೋಟಿ ರೂ. ಟಾಕಾ (ಬಾಂಗ್ಲಾ ಕರೆನ್ಸಿ) ವೌಲ್ಯದ 250 ಚಿನ್ನದ ಬಾರ್‌ಗಳನ್ನು ತನ್ನ ಕಾಲುಗಳ ನಡುವೆ ಇರಿಸಲಾಗಿದ್ದ ಚೀಲವೊಂದರಲ್ಲಿ ಅಡಗಿಸಿಟ್ಟಿದ್ದನೆಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಸುಳಿವು ದೊರೆತ ಕಸ್ಟಮ್ಸ್ ಪೊಲೀಸರು ಅಸ್ವಸ್ಥನಂತೆ ನಟಿಸುತ್ತಿದ್ದ ಆಖ್ತರ್ ಗಾಲಿಕುರ್ಚಿಯ ಮೂಲಕ ತಪಾಸಣೆ ರಹಿತವಾದ ದ್ವಾರವನ್ನು ದಾಟಿಹೋಗಲು ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಿದರೆಂದು ಪತ್ರಿಕೆ ತಿಳಿಸಿದೆ.
Next Story





