ವಿರೋಧಿಗಳ ದಮನಕ್ಕೆ ಸಿಪಿಎಂ ಉತ್ತೇಜನ: ಜೇಟ್ಲಿ

ತಿರುವನಂತಪುರ, ಆ. 6: ವಿರೋಧಿಗಳನ್ನು ದಮನಿಸಲು ಹಾಗೂ ಹಿಂಸಾಚಾರದ ವಾತಾವರಣ ನಿರ್ಮಾಣ ಮಾಡಲು ರಾಜ್ಯದ ಆಡಳಿತಾರೂಢ ಸಿಪಿಎಂ ತನ್ನ ಕಾರ್ಯಕರ್ತರಿಗೆ ಮುಕ್ತತೆ ನೀಡಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದರು.
ಜುಲೈ 29ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್‌ನ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ ಜೇಟ್ಲಿ, ಎಲ್‌ಡಿಎಫ್ ಅಧಿಕಾರಕ್ಕೆ ಬಂದ ಕೂಡಲೇ ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.
ಪ್ರತಿ ಬಾರಿ ಎಲ್‌ಡಿಎಫ್ ಅಧಿಕಾರಿದಲ್ಲಿ ಇರುವಾಗ ಹಿಂಸಾಚಾರದ ಘಟನೆಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು.
ರಾಜೇಶ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಜೇಟ್ಲಿ, ಸಿಪಿಎಂ ತನ್ನ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುತ್ತಿದೆ ಹಾಗೂ ಹಿಂಸೆಯ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದರು.
ಬೆಳಗ್ಗೆ ರಾಜೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ ಜೇಟ್ಲಿ, ಪೊಲೀಸರು ಪಕ್ಷಪಾತ ನೀತಿ ಅನುಸರಿಸುತ್ತಿದ್ದಾರೆ. ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ಹಾಗೂ ಅವರ ಮೇಲೆ ದಾಳಿ ನಡೆದಾಗ ಪೊಲೀಸರು ಮೂಕ ಪ್ರೇಕ್ಷಕರಾಗುತ್ತಿದ್ದಾರೆ ಎಂದು ಆರೋಪಿಸಿದರು.





