150 ಗ್ರಾಂ ಚಿನ್ನಾಭರಣ, 50 ಸಾವಿರ ರೂ., ಮೊಬೈಲ್, ವಾಚ್ ಕಳವು
ರೈಲಿನಲ್ಲಿ ಅಮಲು ಪದಾರ್ಥ ನೀಡಿ ದಂಪತಿಯ ಸೊತ್ತು ಲೂಟಿ

ಉಡುಪಿ, ಆ. 6: ಮುಂಬೈಯಿಂದ ಮುಲ್ಕಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಯುವಕರ ತಂಡವೊಂದು ತಂಪು ಪಾನೀಯದಲ್ಲಿ ಅಮಲು ಪದಾರ್ಥ ನೀಡಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮದ್ಮನೆ ಪಡುಮನೆಯ ಸಂಜೀವ ಶೆಟ್ಟಿ(62) ಹಾಗೂ ಅವರ ಪತ್ನಿ ರತ್ನಾ ಶೆಟ್ಟಿ(56) ಸೊತ್ತುಗಳನ್ನು ಕಳೆದುಕೊಂಡ ದಂಪತಿ ಎಂದು ಗುರುತಿಸಲಾಗಿದೆ.
ಮುಂಬೈಯ ಥಾಣಾ ಎಂಬಲ್ಲಿ ಅಂಗಡಿ ನಡೆಸುತ್ತಿರುವ ಸಂಜೀವ ಶೆಟ್ಟಿಯ ಇಬ್ಬರು ಮಕ್ಕಳು ಮುಂಬೈಯಲ್ಲಿಯೇ ನೆಲೆಸಿದ್ದಾರೆ. ಅನಾರೋಗ್ಯ ಪೀಡಿತ ಪತ್ನಿಯ ಚಿಕಿತ್ಸೆಗಾಗಿ ಸಂಜೀವ ಶೆಟ್ಟಿ ಪತ್ನಿ ಜೊತೆ ಆ. 5ರಂದು ಮಧ್ಯಾಹ್ನ ಥಾಣಾ ನಿಲ್ದಾಣದಿಂದ ಮತ್ಸಗಂಧ ರೈಲಿನ ಎಸ್-2 ಬೋಗಿಯಲ್ಲಿ ಮುಲ್ಕಿಗೆ ಪ್ರಯಾಣ ಬೆಳೆಸಿದ್ದರು.
ರೈಲು ಕುರ್ಲಾ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ಕೆಲ ಯುವಕರು ರೈಲನ್ನು ಹತ್ತಿ ಸಂಜೀವ ಶೆಟ್ಟಿಯವರ ಬೋಗಿಯಲ್ಲಿ ಬಂದು ಕುಳಿತರು. ಪ್ರಯಾಣದ ಮಧ್ಯೆ ಯುವಕರು ರೈಲಿನ ಕಿಟಕಿಯ ಬದಿಯಲ್ಲಿ ಕುಳಿತುಕೊಳ್ಳುವುದಾಗಿ ದಂಪತಿಯಲ್ಲಿ ವಿನಂತಿಸಿಕೊಂಡರು. ಅದಕ್ಕೆ ಸಂಜೀವ ಶೆಟ್ಟಿ ದಂಪತಿ ಅವಕಾಶ ನೀಡಿದರು. ನಂತರ ತುಂಬಾ ಆತ್ಮೀಯವಾಗಿ ಮಾತನಾಡಿಕೊಂಡು ಬಂದ ಯುವಕರು, ತಮ್ಮಲ್ಲಿದ್ದ ತಂಪು ಪಾನೀಯವನ್ನು ದಂಪತಿಗೆ ನೀಡಿದರು. ಅದನ್ನು ಕುಡಿದ ದಂಪತಿ ಕೂಡಲೇ ನಿದ್ದೆಗೆ ಜಾರಿದರು. ಮುಂದೆ ರವಿವಾರ ನಸುಕಿನ ವೇಳೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸಾವಂತವಾಡಿ ನಿಲ್ದಾಣದಲ್ಲಿ ಯುವಕರು ರೈಲಿನಿಂದ ಇಳಿದು ಹೋದರೆನ್ನಲಾಗಿದೆ.
ಬೆಳಗ್ಗೆ ರೈಲು ಕುಂದಾಪುರಕ್ಕೆ ಆಗಮಿಸಿದಾಗಲೂ ದಂಪತಿ ಎಚ್ಚರವಾಗದೆ ನಿದ್ರಾವಸ್ಥೆಯಲ್ಲಿರುವುದನ್ನು ಕಂಡ ಅದೇ ಬೋಗಿಯಲ್ಲಿದ್ದ ಸ್ಥಳೀಯರೊಬ್ಬರು ಮುಂಬೈಯ ಪರಿಚಯದವರಿಗೆ ಕರೆ ಮಾಡಿ ಊರಿನಲ್ಲಿರುವ ಸಂಜೀವ ಶೆಟ್ಟಿ ಕುಟುಂಬದವರನ್ನು ಸಂಪರ್ಕಿಸಿದರು. ರೈಲು ಉಡುಪಿ ಇಂದ್ರಾಳಿ ನಿಲ್ದಾಣಕ್ಕೆ ಆಗಮಿಸಿದಾಗ ಸಂಜೀವ ಶೆಟ್ಟಿಯ ಮನೆಯವರು ಪ್ರಜ್ಞಾವಸ್ಥೆಯಲ್ಲಿದ್ದ ದಂಪತಿಯನ್ನು ರೈಲಿನಿಂದ ಇಳಿಸಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದರು. ಇದೀಗ ದಂಪತಿಗೆ ಪ್ರಜ್ಞೆ ಬಂದಿದ್ದರೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಳಿಕ ಪರಿಶೀಲಿಸಿದಾಗ ರತ್ನಾ ಶೆಟ್ಟಿಯ ಮೈಮೇಲೆ ಇದ್ದ ಕರಿಮಣಿ ಸರ, ಚಿನ್ನದ ಸರ, ನಾಲ್ಕು ಬಳೆ, ಎರಡು ಉಂಗುರ ಮತ್ತು ಸಂಜೀವ ಶೆಟ್ಟಿ ಮೈ ಮೇಲೆ ಇದ್ದ ಬ್ರಾಸ್ಲೈಟ್, ಮೂರು ಉಂಗುರ ಸೇರಿದಂತೆ ಒಟ್ಟು 150 ಗ್ರಾಂ ಚಿನ್ನಾಭರಣ, 50 ಸಾವಿರ ರೂ. ನಗದು, ಒಂದು ಮೊಬೈಲ್, 40 ಸಾವಿರ ರೂ. ಮೌಲ್ಯದ ವಾಚ್, ಬ್ಯಾಗ್ ಕಳವಾಗಿರುವುದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ರೈಲ್ವೆ ಪೊಲೀಸರು ಘಟನೆ ನಡೆದ ಮಹಾರಾಷ್ಟ್ರ ರಾಜ್ಯದ ಅಂಜನಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಅಂಜನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







