ರೋಸ್ಟರ್ ನಿಯಮದಂತೆ ಸೀಟು ಹಂಚಿಕೆಗೆ ಆಗ್ರಹ
ಬೆಂಗಳೂರು, ಆ.7: ವೈದ್ಯಕೀಯ, ಕೃಷಿ ವಿಜ್ಞಾನ, ತಾಂತ್ರಿಕ ಸೇರಿದಂತೆ ಇನ್ನಿತರೆ ಸೀಟು ಹಂಚಿಕೆ ಸಂದರ್ಭದಲ್ಲಿ ರೋಸ್ಟರ್ ನಿಯಮದಂತೆ ಸೀಟು ಹಂಚಿಕೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಘಟನಾ ಸಂಚಾಲಕ ಎಸ್.ಆರ್.ಕೊಲ್ಲೂರು, ಸರಕಾರ ಸಿಇಟಿ ನಂತರ ಸೀಟು ಹಂಚಿಕೆ ಮಾಡುವಲ್ಲಿ ರೋಸ್ಟರ್ ಪದ್ಧತಿ ಅನುಸರಿಸುತ್ತಿಲ್ಲ. ಇದರಿಂದಾಗಿ ಎಸ್ಸಿ, ಎಸ್ಟಿ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿ ಪರಿಣಾಮಕಾರಿಯಾಗಿ ಸಿಗುತ್ತಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೋಸ್ಟರ್ ಪದ್ಧತಿಯಂತೆ ಪರಿಶಿಷ್ಟ ಜಾತಿಗೆ ಶೇ.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ಮೀಸಲಾತಿ ನೀಡಬೇಕು ಎಂದು ಇದೆ. ಆದರೆ, ರಾಜ್ಯ ಸರಕಾರ ಈ ಪದ್ಧತಿಯಂತೆ ಸೀಟು ಹಂಚಿಕೆ ಮಾಡುತ್ತಿಲ್ಲ ಎಂದ ಅವರು, ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದ ಇಲ್ಲಿಯವರೆಗೂ ರೋಸ್ಟರ್ ಪದ್ಧತಿಯಂತೆ ಸೀಟು ಹಂಚಿಕೆ ಮಾಡಲು ಅಧಿಕಾರಿಗಳು ಮತ್ತು ರಾಜಕಾರಣಿಗಳು ಮುಂದಾಗಿಲ್ಲ ಎಂದು ದೂರಿದರು.
ಮುಂದಿನ ದಿನಗಳಲ್ಲಿ ನಡೆಯುವ ಸೀಟು ಹಂಚಿಕೆಯಲ್ಲಿ ಕಡ್ಡಾಯವಾಗಿ ರೋಸ್ಟರ್ ಪದ್ಧತಿಯನ್ನು ಅನುಸರಿಸಬೇಕು. ಈ ಕುರಿತು ಮುಖ್ಯಮಂತ್ರಿಗಳು ಕಠಿಣವಾದ ನಿರ್ಧಾರ ಕೈಗೊಳ್ಳಬೇಕು. ಈಗಾಗಲೇ ಹಂಚಿಕೆಯಾದ ಸೀಟುಗಳನ್ನು ರದ್ದುಗೊಳಿಸಿ ವಿವಿಧ ಕೆಟಗಿರಿ ಅಡಿಯಲ್ಲಿ ಪುನಃ ರ್ಯಾಂಕ್‌ವಾರು ಕೌನ್ಸೆಲಿಂಗ್ ಮಾಡಿ ರೋಸ್ಟರ್ ನಿಯಮದಂತೆ ಹಂಚಿಕೆ ಮಾಡಬೇಕು. 24-25 ವರ್ಷಗಳಲ್ಲಿ ರೋಸ್ಟರ್ ನಿಯಮವಿಲ್ಲದೆ ವೈದ್ಯಕೀಯ ಮತ್ತು ತಾಂತ್ರಿಕ ಸೀಟುಗಳ ಹಂಚಿಕೆ ಮಾಡಿರುವ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.







