ದಂಪತಿ ಆತ್ಮಹತ್ಯೆ
ಬೆಂಗಳೂರು, ಆ.7: ಕೌಟುಂಬಿಕ ಕಲಹ ಕಾರಣದಿಂದಾಗಿ ಪತಿ, ಪತ್ನಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊರವಲಯದ ಹೊಸಕೋಟೆಯ ಬೇಗೂರು ಗ್ರಾಮದ ನಿವಾಸಿಗಳಾದ ಶಿವರಾಜ್(30), ಪತ್ನಿ ರಾಧ(27) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರವಿವಾರ ರಾತ್ರಿ ಮನೆಯಲ್ಲಿ ಶಿವರಾಜ್ ಹಾಗೂ ರಾಧ, ಮೇಲ್ಛಾವಣಿಯ ಪೈಪ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಯಾದರೂ ಇಬ್ಬರು ಮನೆಯಿಂದ ಹೊರಬಾರದಿದ್ದರಿಂದ ಆತಂಕಗೊಂಡ ಶಿವರಾಜ್ ಪೋಷಕರು ಮನೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆಗಾಗ ದಂಪತಿ ನಡುವೆ ಜಗಳವಾಗುತ್ತಿದ್ದು, ರಾತ್ರಿ ಕೂಡ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಸೂಲಿಬೆಲೆ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





