ಆ. 10ರಂದು ‘ಆಳ್ವಾರೊಂದಿಗೆ ನಾವು’ ಸಾರ್ವಜನಿಕ ಸಭೆ

ಮಂಗಳೂರು, ಆ.7: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಕಾವ್ಯಾ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ಆದರೂ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ಅವರ ವಿರುದ್ಧ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಪುರಷೋತ್ತಮ ಭಂಡಾರಿ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಡಾ. ಮೋಹನ ಆಳ್ವರ ತೇಜೋವಧೆ ಮಾಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಅವರು ತನಿಖೆಗೆ ಸಂಪೂರ್ಣ ಸಹಕಾರ ಮಾಡುವುದಾಗಿ ಹೇಳಿದ ಬಳಿಕವೂ ಇಂತಹ ಟೀಕೆಗಳು ವ್ಯಕ್ತವಾಗುತ್ತಿರುವುದರಿಂದ ಅವರು ಘಾಸಿಗೊಂಡಿದ್ದಾರೆ. ಅವರಿಗೆ ಧೈರ್ಯ ತುಂಬಲು ಆ. 10ರಂದು ಕಲೆ, ಸಾಹಿತ್ಯ ಸಾಂಸ್ಕೃತಿಕ ಕ್ರೀಡಾ ಸಾಧಕರ - ಸಂಘಟಕರ ವತಿಯಿಂದ ‘ಆಳ್ವರೊಂದಿಗೆ ನಾವು’ ಎಂಬ ಸಾರ್ವಜನಿಕ ಸಭೆಯನ್ನು ಆಯೋಜಿಸಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು, ಯೋಗಬಂಧುಗಳು, ಸಾಹಿತಿಗಳು, ಕಲಾಸಂಘಟಕರು ಮತ್ತು ಕಲಾವಿದರು ಭಾಗವಹಿಸುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಚಂದ್ರಶೇಖರ ನಾವಡ, ನಿತ್ಯಾನಂದ ರಾವ್, ಜಗದೀಶ್ ಶೆಟ್ಟಿ, ಕಿಶೋರ್ ಡಿ.ಶೆಟ್ಟಿ, ಗಣೇಶ್ ಸೋಮಯಾಜಿ, ಪ್ರಮೋದ್ ಆರಿಗ ಉಪಸ್ಥಿತರಿದ್ದರು.





