ಕಾಂಗ್ರೆಸ್ ಶಾಸಕರು ಗುಜರಾತ್‌ಗೆ, ತಪ್ಪದ ರೆಸಾರ್ಟ್ ವಾಸ

ಅಹ್ಮದಾಬಾದ್,ಆ.7: ರಾಜ್ಯಸಭಾ ಚುನಾವಣೆಗೆ ಮುನ್ನ ‘ಆಪರೇಷನ್ ಕಮಲ’ದ ಭೀತಿಯಿಂದ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಮೊಕ್ಕಾಂ ಹೂಡಿದ್ದ ಕಾಂಗ್ರೆಸ್ ಶಾಸಕರು ಸೋಮವಾರ ಬೆಳಿಗ್ಗೆ ರಾಜ್ಯಕ್ಕೆ ಮರಳಿದರಾದರೂ ರೆಸಾರ್ಟ್ ವಾಸ ಮಾತ್ರ ಅವರಿಗೆ ತಪ್ಪಿಲ್ಲ. ಇಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ನೇರವಾಗಿ ಆನಂದ್ ಜಿಲ್ಲೆಯ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.
ಮಂಗಳವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸ್ಪರ್ಧಿಸಿದ್ದಾರೆ.
‘‘ನಮ್ಮೆಲ್ಲ ಶಾಸಕರು ವಾಪಸಾಗಿದ್ದಾರೆ ಮತ್ತು ಅವರನ್ನು ಆನಂದ್ ಪಟ್ಟಣದ ಹೊರವಲಯದಲ್ಲಿರುವ ನಿಜಾನಂದ ರೆಸಾರ್ಟ್‌ನಲ್ಲಿ ಇರಿಸಲಾಗಿದೆ ’’ಎಂದು ಕಾಂಗ್ರೆಸ್‌ನ ಮುಖ್ಯ ಸಚೇತಕ ಹಾಗೂ ಹಿರಿಯ ನಾಯಕ ಶೈಲೇಶ ಪರಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘‘ಇಂದು ರಕ್ಷಾಬಂಧನದ ದಿನವಾಗಿದ್ದರೂ ನಮ್ಮ ಶಾಸಕರು ತಮ್ಮ ಮನೆಗಳಿಗೆ ಮರಳದಿರಲು ಮತ್ತು ಕಾಂಗ್ರೆಸ್‌ನ ವಿಧೇಯ ಯೋಧರಾಗಿರಲು ನಿರ್ಧರಿಸಿದ್ದಾರೆ. ಅವರು ಒಟ್ಟಾಗಿಯೇ ಇರಲಿದ್ದಾರೆ ಮತ್ತು ಮಂಗಳವಾರ ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕಾಗಿ ಆನಂದ್‌ನಿಂದ ಅಹ್ಮದಾಬಾದ್‌ಗೆ ತೆರಳಲಿದ್ದಾರೆ’’ ಎಂದು ಹೇಳಿದ ಪರಮಾರ್, ರೆಸಾರ್ಟ್‌ಗೆ ಯಾವುದೇ ಪೊಲೀಸ್ ಭದ್ರತೆಯನ್ನು ಪಡೆದುಕೊಂಡಿಲ್ಲ ಎಂದರು.
ಮೂರು ರಾಜ್ಯಸಭಾ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಇತ್ತೀಚಿಗಷ್ಟೇ ಬಿಜೆಪಿಗೆ ಸೇರ್ಪಡೆ ಗೊಂಡಿರುವ ಮಾಜಿ ಕಾಂಗ್ರೆಸ್ ಸಚೇತಕ ಬಲವಂತ ಸಿಂಹ್ ರಾಜಪೂತ್ ಸೇರಿದಂತೆ ಮೂವರು ಬಿಜೆಪಿ ಅಭ್ಯರ್ಥಿಗಳು ಮತ್ತು ಪಟೇಲ್ ಕಣದಲ್ಲಿದ್ದಾರೆ.
ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯಕ ಶಂಕರಸಿಂಹ್ ವೇಲಾ ಅವರು ಪಕ್ಷವನ್ನು ತೊರೆದ ಬಳಿಕ ರಾಜ್ಯಸಭಾ ಚುನಾವಣೆಯನ್ನು ಗೆಲ್ಲಲು ಉಭಯ ಪಕ್ಷಗಳ ನಡುವೆ ಹಣಾಹಣಿ ಹೋರಾಟ ನಡೆಯುತ್ತಿದೆ.
ಕಾಂಗ್ರೆಸ್‌ಗೆ ಹಿನ್ನಡೆಯನ್ನುಂಟು ಮಾಡಿದ ಬೆಳವಣಿಗೆಯಲ್ಲಿ ಜು.27 ಮತ್ತು 28ರಂದು ಆರು ಶಾಸಕರು ಪಕ್ಷವನ್ನು ತೊರೆದಿದ್ದರು. ಹೀಗಾಗಿ 182 ಸದಸ್ಯಬಲದ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲವೀಗ 57ರಿಂದ 51ಕ್ಕಿಳಿದಿದೆ.
ಇದರಿಂದ ಗೊಂದಲಕ್ಕೆ ಸಿಲುಕಿದ್ದ ಕಾಂಗ್ರೆಸ್ ಬಿಜೆಪಿಯ ‘ಕುದುರೆ ವ್ಯಾಪಾರ’ದ ಪ್ರಯತ್ನಗಳಿಂದ ರಕ್ಷಣೆಗಾಗಿ ತನ್ನ 44 ಶಾಸಕರನ್ನು ಬೆಂಗಳೂರಿಗೆ ಸಾಗಿಸಿತ್ತು.







