0.01 ಸೆಕೆಂಡ್ ಅಂತರದಲ್ಲಿ ವರ್ಲ್ಡ್ ಚಾಂಪಿಯನ್ ಶಿಪ್ ಚಿನ್ನ ತಪ್ಪಿದಾಗ..
ಮಹಿಳೆಯರ 100 ಮೀ. ಓಟ: ಟೊರಿ ಬೌವೀ ಚಾಂಪಿಯನ್

ಲಂಡನ್, ಆ.7: ಅಮೆರಿಕದ ಓಟಗಾರ್ತಿ ಟೊರಿ ಬೌವೀ ರವಿವಾರ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳೆಯರ 100 ಮೀ. ಓಟದ ಫೈನಲ್‌ನಲ್ಲಿ 0.01 ಸೆಕೆಂಡ್‌ಗಳ ಅಂತರದಲ್ಲಿ ಮೊದಲ ಸ್ಥಾನ ಪಡೆದರು. 26ರ ಹರೆಯದ ಬೌವೀ ನಿಧಾನ ಆರಂಭ ಪಡೆದರೂ 10.85 ಸೆಕೆಂಡ್‌ನಲ್ಲಿ 100 ಮೀ. ಓಟವನ್ನು ಪೂರ್ಣಗೊಳಿಸಿದರು. ಬೌವೀಗೆ ತೀವ್ರ ಸ್ಪರ್ಧೆಯೊಡ್ಡಿದ್ದ ಐವರಿಕೋಸ್ಟ್‌ನ ಮೇರಿ-ಜೋಸ್(10.86ಸೆ.) 0.01 ಸೆಕೆಂಡ್‌ನಿಂದ ಮೊದಲ ಸ್ಥಾನ ವಂಚಿತರಾಗಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಹಾಲೆಂಡ್‌ನ ಡಫಿನ್ ಚಿಪ್ಪರ್ಸ್(10.96 ಸೆ.)ಕಂಚಿನ ಪದಕ ಜಯಿಸಿದ್ದಾರೆ.

(ಟೊರಿ ಬೌವೀ)
ಕಳೆದ ವರ್ಷ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬೌವೀ ಇದೀಗ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಬೌವೀ 100 ಮೀ. ಓಟವನ್ನು ಮುಗಿಸಿದ ತಕ್ಷಣ ಆಯತಪ್ಪಿ ಕೆಳಗೆ ಬಿದ್ದರು. ಪದಕದ ಭರವಸೆ ಮೂಡಿಸಿದ್ದ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಎಲೈನ್ ಥಾಮ್ಸನ್(10.98 ಸೆಕೆಂಡ್) ಐದನೆ ಸ್ಥಾನಕ್ಕೆ ತೃಪ್ತಿಪಟ್ಟರು.
ಶನಿವಾರ ನಡೆದ ಪುರುಷರ 100 ಮೀ.ಓಟದ ಫೈನಲ್‌ನಲ್ಲಿ ಅಮೆರಿಕದ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಜಮೈಕಾದ ಓಟದ ರಾಜ ಉಸೇನ್ ಬೋಲ್ಟ್‌ರನ್ನು ಹಿಂದಿಕ್ಕಿ ಚಾಂಪಿಯನ್‌ಪಟ್ಟಕ್ಕೇರಿದ್ದರು. ರವಿವಾರ ನಡೆದ ಮಹಿಳಾ ವಿಭಾಗದ 100 ಮೀ. ಓಟದಲ್ಲಿ ಅಮೆರಿಕದ ಬೌವೀ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.







