ಕರ್ನಾಟಕ ದೇಶಕ್ಕೆ ಮಾದರಿ ಎಂಬುದು ಸಾಬೀತು: ಯು.ಟಿ.ಖಾದರ್
‘ಶಾದಿಭಾಗ್ಯ’ ಯೋಜನೆ ಜಾರಿಗೆ ಕೇಂದ್ರದ ನಿರ್ಧಾರ

ಬೆಂಗಳೂರು, ಆ. 7: ರಾಜ್ಯ ಸರಕಾರ ರೂಪಿಸಿದ್ದ ‘ಶಾದಿಭಾಗ್ಯ’ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತರಲು ತೀರ್ಮಾನಿಸಿದ್ದು, ಕರ್ನಾಟಕ ದೇಶಕ್ಕೆ ಮಾದರಿ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ರೂಪಿಸಿದ ದಂತಭಾಗ್ಯ, ಇ-ಮಾರುಕಟ್ಟೆ, ಇದೀಗ ಶಾದಿಭಾಗ್ಯ ಸೇರಿ ಹಲವು ಯೋಜನೆಗಳನ್ನು ಕೇಂದ್ರ ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. ಇದೀಗ ಗುಜರಾತ್ ಮಾದರಿ ನೇಪಥ್ಯಕ್ಕೆ ಸರಿದಿದ್ದು, ರಾಜ್ಯ ದೇಶಕ್ಕೆ ಮಾದರಿ ಎಂಬುದು ಬಹಿರಂಗವಾಗಿದೆ ಎಂದರು.
‘ಶಾದಿಭಾಗ್ಯ’ ಯೋಜನೆಯನ್ನು ವಿಪಕ್ಷ ಬಿಜೆಪಿ ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಇದೀಗ ಅದೇ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದಾರೆ. ಹೀಗಾಗಿ ಕೇವಲ ವಿರೋಧಿಸಬೇಕೆಂದು ಕಾರಣಕ್ಕೆ ಪ್ರತಿಭಟನೆ ನಡೆಸಿದ್ದು ಎಂಬುದು ಬಹಿರಂಗ ಆಗಿದೆ ಎಂದು ಖಾದರ್ ಟೀಕಿಸಿದರು.
ವಿರೋಧದ ನೆಪದಲ್ಲಿ ಜನರನ್ನು ಗೊಂದಲದಲ್ಲಿಟ್ಟು, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತಗಳಿಕೆಗೆ ಬಿಜೆಪಿ ಯತ್ನಿಸುತಿದೆ ಎಂಬುದು ಗೊತ್ತಾಗಿದೆ ಎಂದ ಖಾದರ್, ಬಿಜೆಪಿಯ ಅಸಲಿ ಬಣ್ಣವನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಖಾದರ್ ಕೋರಿದರು.
‘ಅಲ್ಪಸಂಖ್ಯಾತರನ್ನು ಓಲೈಸಲು ಕೇಂದ್ರ ‘ಶಾದಿ ಶಗುನ್’ ಎಂಬ ಯೋಜನೆ ಜಾರಿಗೆ ಮುಂದಾಗಿದ್ದು, ರಾಜ್ಯ ಸರಕಾರದ ಯೋಜನೆಯನ್ನು ಕೇಂದ್ರ ಅನುಷ್ಠಾನಗೊಳಿಸಲು ಹೊರಟಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ ರಾಷ್ಟ್ರಕ್ಕೆ ಮಾದರಿ. ಈ ಹಿಂದೆ ಯೋಜನೆ ವಿರೋಧಿಸಿದ್ದ ರಾಜ್ಯ ಬಿಜೆಪಿ ಈಗೇನು ಹೇಳುತ್ತದೆ’
-ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಸಚಿವೆ







