16ಕೋಟಿ ರೂ. ಮೀನುಗಾರಿಕಾ ಡಿಸೇಲ್ ಸಬ್ಸಿಡಿ ಬಿಡುಗಡೆ: ಪ್ರಮೋದ್ ಮಧ್ವರಾಜ್

ಉಡುಪಿ, ಆ.7: ಎಪ್ರಿಲ್ ಮತ್ತು ಮೇ ತಿಂಗಳ ಮೀನುಗಾರಿಕಾ ಡಿಸೇಲ್ ಸಬ್ಸಿಡಿಯ ಬಾಕಿ ಮೊತ್ತ 16ಕೋಟಿ ರೂ.ವನ್ನು ಸರಕಾರ ನೇರವಾಗಿ ಮೀನು ಗಾರರ ಖಾತೆಗಳಿಗೆ ಜಮಾ ಮಾಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ 74 ಅಕ್ರಮ ಸಕ್ರಮ ಮತ್ತು 63 ಹೊಸತು ಸೇರಿದಂತೆ ಒಟ್ಟು 137 ಡಿಸೇಲ್ ಪಾಸ್ ಪುಸ್ತಕಗಳನ್ನು ಮೀನುಗಾರರಿಗೆ ವಿತರಿಸಿ ಅವರು ಮಾತನಾಡುತಿದ್ದರು.
ದ.ಕ. ಜಿಲ್ಲೆಯ ಎಪ್ರಿಲ್ ಮತ್ತು ಮೇ ತಿಂಗಳ ಹಾಗೂ ಉಡುಪಿ ಜಿಲ್ಲೆಯ ಮೇ ತಿಂಗಳ ಬಾಕಿ ಸಬ್ಸಿಡಿ ಮೊತ್ತವನ್ನು ಈ ತಿಂಗಳ ಪ್ರಥಮ ವಾರದಲ್ಲಿ ಬಿಡುಗಡೆ ಗೊಳಿಸಿದ್ದು, ಇದರಿಂದ ಈಗ ಯಾವುದೇ ಡಿಸೇಲ್ ಸಬ್ಸಿಡಿ ಬಾಕಿ ಇಲ್ಲವಾಗಿದೆ ಎಂದರು. ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ಸಕ್ರಮದಡಿ ಮೀನುಗಾರಿಕಾ ದೋಣಿಗಳಿಗೆ ಸಾಧ್ಯತಾ ಪತ್ರಗಳನ್ನು ನೀಡಲಾಗಿದ್ದು, ಬಳಿಕ ಇದನ್ನು ಸರಳಗೊಳಿಸಿ 1200 ಹೊಸ ಸಾಧ್ಯತಾ ಪತ್ರವನ್ನು ವಿತರಿಸಲಾಗಿದೆ. ಇವುಗಳನ್ನು ಪರಿಶೀಲಿಸಿ ಡಿಸೇಲ್ ಸಬ್ಸಿಡಿಯನ್ನು ದೊರಕಿಸಿಕೊಡುವ ಉದ್ದೇಶದಿಂದ ಯಾವುದೇ ರಾಜಕೀಯ ಇಲ್ಲದೆ ದೋಣಿ ಸಿಕ್ಕಿದವರಿಗೆ ಪಾಸ್‌ಬುಕ್ ಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವ ನಾಥ್, ಸಹಾಯಕ ನಿರ್ದೇಶಕ ಶಿವಕುಮಾರ್, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್ ಮೊದಲಾದವರು ಉಪಸ್ಥಿತರಿದ್ದರು.
‘ಅಕ್ರಮ ಡಿಸೇಲ್ ವಿತರಿಸುವ ಬಂಕ್‌ಗಳು ಕಪ್ಪುಪಟ್ಟಿಗೆ’
ಬೇರೆ ಪಾಸ್‌ಬುಕ್‌ಗಳ ಮೂಲಕ ದೋಣಿಗಳಿಗೆ ಡಿಸೇಲ್ ಬಳಸುವುದನ್ನು ನಿಷೇಧಿಸಲಾಗಿದ್ದು, ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲು ಅಧಿಕಾರಿ ಗಳನ್ನು ನೇಮಕ ಮಾಡಲಾಗಿದೆ. ಆಯಾ ದೋಣಿಯವರು ತಮಗೆ ನೀಡಿದ ಪಾಸ್ ಬುಕ್‌ನಿಂದಲೇ ಡಿಸೇಲ್‌ನ್ನು ಪಡೆಯಬೇಕು. ಅಕ್ರಮವಾಗಿ ಡಿಸೇಲ್ ನೀಡುವ ಬಂಕ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಈ ಬಾರಿ ರಾಜ್ಯ ಸರಕಾರ ಡಿಸೇಲ್ ಸಬ್ಸಿಡಿಗೆ 157ಕೋಟಿ ರೂ. ಮೀಸಲಿರಿಸಿದ್ದು, ಅದನ್ನು ಸರಿ ಯಾಗಿ ಬಳಸುವ ನಿಟ್ಟಿನಲ್ಲಿ ಎಲ್ಲ ಮೀನುಗಾರರು ಸಹಕಾರ ನೀಡಬೇಕು. ಇದರಲ್ಲಿ ಮೋಸ ವಂಚನೆಗೆ ಅವಕಾಶ ನೀಡಬಾರದು ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.







