‘ರೂಪಾಯಿ ಮೌಲ್ಯ ಏರಿಕೆಯಿಂದ ರಫ್ತುದಾರರಿಗೆ ಸಮಸ್ಯೆ’

ಹೊಸದಿಲ್ಲಿ, ಆ.7: ಭಾರತೀಯ ರೂಪಾಯಿ ಕರೆನ್ಸಿಯ ವಿದೇಶಿ ಮೌಲ್ಯವು ಆಂತರಿಕ ಸಾಮರ್ಥ್ಯವನ್ನು ಮೀರಿದ ಕಾರಣ ರಫ್ತುದಾರರಿಗೆ ಸಮಸ್ಯೆಯಾಗಿದೆ. ರೂಪಾಯಿ ಎದುರು ಡಾಲರ್ ಮೌಲ್ಯ ಕಡಿಮೆಯಾಗುತ್ತಿರುವುದರಿಂದ ರಫ್ತುದಾರರ ಸ್ಫರ್ಧಾತ್ಮಕ ಅನುಕೂಲತೆಗೆ ತೊಂದರೆಯಾಗಿದೆ ಎಂದು ಉದ್ಯಮಿಗಳ ಸಂಘಟನೆ ‘ಅಸೋಚಮ್’ ತಿಳಿಸಿದೆ.
ಹಣದುಬ್ಬರ ಕಡಿಮೆಯಾದಾಗ್ಯೂ ರೂಪಾಯಿಯ ವಿದೇಶಿ ಮೌಲ್ಯವು ಆಂತರಿಕ ವೌಲ್ಯಕ್ಕಿಂತ ಬಹಳಷ್ಟು ಹೆಚ್ಚಾಗಿದೆ. ರೂಪಾಯಿ ಎದುರು ಡಾಲರ್ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು ರಫ್ತು ಪ್ರಕ್ರಿಯೆಯ ಸ್ಪರ್ಧಾತ್ಮಕ ಅನುಕೂಲತೆಯನ್ನು ಅಳಿಸಿ ಹಾಕಿದೆ ಎಂದು ‘ಅಸೋಚಮ್’ ತಿಳಿಸಿದೆ. ಡಾಲರ್ ಮೌಲ್ಯ ಕಳೆದೊಂದು ವರ್ಷದಲ್ಲಿ ಶೇ.6ಷ್ಟು ಕಡಿಮೆಯಾಗಿದ್ದು 2016ರ ಆಗಸ್ಟ್‌ನಲ್ಲಿ ಡಾಲರ್ ಎದುರು ರೂಪಾಯಿ ವೌಲ್ಯ 66.93 ಆಗಿದ್ದರೆ, ಈಗ 63.63ರಿಂದ 63.70ಕ್ಕೆ ಏರಿದೆ ಎಂದು ‘ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್’ (ಅಸೋಚಮ್) ತಿಳಿಸಿದೆ.
ಹಣದುಬ್ಬರ ಕಡಿಮೆಯಾಗಿದೆ. ಆದರೆ ದರ ಇಳಿಕೆಯಾಗಿಲ್ಲ. ಅಂದರೆ ರೂಪಾಯಿ ಯ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ. ಆದರೆ ಡಾಲರ್ ಎದುರು ವೌಲ್ಯವನ್ನು ಅಂದಾಜು ಮಾಡಿದಾಗ ರೂಪಾಯಿಯು ಶೇ.6ಷ್ಟು ಹೆಚ್ಚಳ ಸಾಧಿಸಿದೆ. ಇದರಿಂದ ರಫ್ತು ಅಭಿವೃದ್ಧಿಯ ವೇಗಕ್ಕೆ ತಡೆ ಒಡ್ಡಿದಂತಾಗಿದೆ ಎಂದು ‘ಅಸೋಚಮ್’ ತಿಳಿಸಿದೆ.
ಜೂನ್ 2017ಕ್ಕೆ ಅಂತ್ಯವಾಗುವ ಕಳೆದ 9 ತಿಂಗಳಾವಧಿಯಲ್ಲಿ ರಫ್ತು ಅಭಿವೃದ್ಧಿಯಾಗುತ್ತಿದೆ ಎಂದು ಆರ್‌ಬಿಐ ತಿಳಿಸಿದ್ದು , ಮೇ, ಜೂನ್‌ನಲ್ಲಿ ರಫ್ತು ಅಭಿವೃದ್ಧಿ ಪ್ರಕ್ರಿಯೆ ದುರ್ಬಲವಾಗಿದೆ. ರಫ್ತು ಸರಕಿನ ವೌಲ್ಯ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಆರ್‌ಬಿಐ ತಿಳಿಸಿದೆ.
2017ರ ಜೂನ್‌ನಲ್ಲಿ ರಫ್ತು ಪ್ರಕ್ರಿಯೆಯಲ್ಲಿ ಶೇ.4.39 ಪ್ರಗತಿ ದಾಖಲಾಗಿದ್ದು 23.56 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಸಾಧಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಫ್ತಿನ ಮೊತ್ತ 22.57 ಬಿಲಿಯನ್ ಡಾಲರ್ ಆಗಿತ್ತು. ಹಾಲಿ ವಿತ್ತ ವರ್ಷದಲ್ಲಿ ಈ ಪ್ರಗತಿಯ ಗತಿ ಶೇ.20ರ ಅತ್ಯುನ್ನತ ಮಟ್ಟ ತಲುಪಿತ್ತು. ಅಲ್ಲದೆ ರೂಪಾಯಿ ಎದುರು ಡಾಲರ್‌ನ ಮವಲ್ಯ ಕುಸಿಯುತ್ತಿರುವ ಕಾರಣ ಜೂನ್ 2017ರಲ್ಲಿ ರಫ್ತು ಪ್ರಕ್ರಿಯೆ ಶೇ.0.04ರಷ್ಟು ನಕಾರಾತ್ಮಕ ಪ್ರಗತಿ ದಾಖಲಿಸಿದೆ . ಸ್ಟಾಕ್‌ಮಾರ್ಕೆಟ್‌ನಲ್ಲಿ ಉತ್ತಮ ಹೂಡಿಕೆ ಇರುವ ಕಾರಣ ಈ ಪ್ರವೃತ್ತಿ ಮುಂದುವರಿಯಲಿದೆ ಎಂದು ಅಸೋಚಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ಹೇಳಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯಲ್ಲಿ ಜಾಗತಿಕ ಹೂಡಿಕೆ ಹೆಚ್ಚಿದ ಕಾರಣ ದೇಶದ ವಿದೇಶ ವಿನಿಮಯ ಮೀಸಲು 392 ಬಿಲಿಯನ್ ಡಾಲರ್ ದಾಖಲೆ ಮಟ್ಟ ತಲುಪಿದೆ ಎಂದವರು ತಿಳಿಸಿದ್ದಾರೆ.







