ಅಮಾನ್ಯೀಕರಣದ ಪ್ರಭಾವ: ಐಟಿ ರಿಟರ್ನ್ಸ್ ಶೇ.25ರಷ್ಟು ಹೆಚ್ಚಳ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ.7: ಅಮಾನ್ಯೀಕರಣದ ಕಾರಣ ಆದಾಯ ತೆರಿಗೆ (ಐಟಿ)ರಿಟರ್ನ್ ಸಲ್ಲಿಕೆ ಪ್ರಮಾಣದಲ್ಲಿ ಸುಮಾರು ಶೇ.25ರಷ್ಟು ಹೆಚ್ಚಳವಾಗಿದೆ ಎಂದು ಸರಕಾರ ತಿಳಿಸಿದೆ. 2016-17ರ ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 5 ಅಂತಿಮ ದಿನವಾಗಿದ್ದು, ಈ ಅವಧಿಯಲ್ಲಿ 2.82 ಕೋಟಿ ಐಟಿ ರಿಟರ್ನ್ಸ್ ಸಲ್ಲಿಸಲಾಗಿದೆ. ಕಳೆದ ವರ್ಷ 2.26 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಸುಮಾರು ಶೇ.25ರಷ್ಟು ಹೆಚ್ಚಳವಾಗಿದೆ . ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿ ಮುಂಗಡ ತೆರಿಗೆ ಪಾವತಿ ಪ್ರಮಾಣದಲ್ಲೂ ಭಾರೀ ಹೆಚ್ಚಳ ದಾಖಲಾಗಿದೆ ಎಂದು ಸರಕಾರ ತಿಳಿಸಿದೆ.
ನೋಟು ಅಮಾನ್ಯೀಕರಣ ಮತ್ತು ‘ಆಪರೇಷನ್ ಕ್ಲೀನ್ ಮನಿ’ ಪ್ರಕ್ರಿಯೆಯಿಂದ ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. 2017ರ ಆಗಸ್ಟ್ 5ರವರೆಗಿನ ಅವಧಿಯಲ್ಲಿ 2,82,92,955 ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದರೆ ಕಳೆದ ವರ್ಷದ ಅವಧಿಯಲ್ಲಿ 2,26,97,843 ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. ಇದು ಶೇ.24.7ರಷ್ಟು ಹೆಚ್ಚಳವಾಗಿದೆ ಎಂದು ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಡಿಸೆಂಬರ್ 30ರಂದು ನೋಟು ಅಮಾನ್ಯೀಕರಣದ ಅವಧಿ ಕೊನೆಗೊಂಡ ಬಳಿಕ ಆರಂಭಿಸಲಾದ ‘ಸ್ವಚ್ಛ ಹಣ’ ಅಭಿಯಾನದಡಿ ಬೃಹತ್ ಮೊತ್ತದ ಅಘೋಷಿತ ಸಂಪತ್ತು ಬಹಿರಂಗಗೊಂಡಿದೆ.
ಅಲ್ಲದೆ ವೈಯಕ್ತಿಕ ತೆರಿಗೆದಾರರ ಐಟಿ ರಿಟರ್ನ್ಸ್ ಸಲ್ಲಿಕೆಯಲ್ಲೂ ಹೆಚ್ಚಳ ದಾಖಲಾಗಿದೆ. ಈ ವರ್ಷ ಕಳೆದ ವರ್ಷಕ್ಕಿಂತ 2.79 ಕೋಟಿ ಹೆಚ್ಚುವರಿ ವೈಯಕ್ತಿಕ ತೆರಿಗೆದಾರರು ಐಟಿ ರಿಟರ್ನ್ಸ್ ದಾಖಲಿಸಿದ್ದಾರೆ. ನೋಟು ಅಮಾನ್ಯೀಕರಣದ ಕಾರಣ ಗಮನಾರ್ಹ ಪ್ರಮಾಣದಲ್ಲಿ ಹೊಸ ತೆರಿಗೆದಾರರು ತೆರಿಗೆ ಜಾಲಕ್ಕೆ ಸೇರ್ಪಡೆಗೊಂಡಿರುವುದನ್ನು ಇದು ತೋರಿಸುತ್ತದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.
ನೇರ ತೆರಿಗೆ ಸಂಗ್ರಹದಲ್ಲೂ ಭಾರೀ ಹೆಚ್ಚಳವಾಗಿದೆ. ವೈಯಕ್ತಿಕ ಆದಾಯ ತೆರಿಗೆ(ಕಾರ್ಪೊರೇಟ್ ತೆರಿಗೆ ಹೊರತುಪಡಿಸಿ)ಗೆ ಸಂಬಂಧಿಸಿದ ಮುಂಗಡ ತೆರಿಗೆ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.41.79ರಷ್ಟು ಅಧಿಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವೈಯಕ್ತಿಕ ಆದಾಯ ತೆರಿಗೆಯಡಿ ಪಾವತಿಸುವ ಸ್ವ-ನಿರ್ಧರಿತ ತೆರಿಗೆ ಪ್ರಮಾಣದಲ್ಲೂ ಶೇ.34.25ರಷ್ಟು ಹೆಚ್ಚಳವಾಗಿದೆ . ಐಟಿ ರಿಟರ್ನ್ಸ್ ಸಲ್ಲಿಕೆ ಹಾಗೂ ತೆರಿಗೆ ಸಂಗ್ರಹ- ಈ ಎರಡರಲ್ಲೂ ಕಂಡು ಬಂದಿರುವ ಹೆಚ್ಚಳ ಕಾಳಧನದ ವಿರುದ್ಧದ ಹೋರಾಟದಲ್ಲಿ ಸರಕಾರ ಹೊಂದಿರುವ ಬದ್ಧತೆಯ ಸಕಾರಾತ್ಮಕ ಪರಿಣಾಮವಾಗಿದೆ ಎಂದು ಸಚಿವಾಲಯ ತಿಳಿಸಿದೆ.







