ಕೆಎಸ್ಸಾರ್ಟಿಸಿಗೆ ಶೀಘ್ರದಲ್ಲಿ 1706 ಹೊಸ ಬಸ್ ಗಳು: ಗೋಪಾಲ ಪೂಜಾರಿ
ಸುಬ್ರಹ್ಮಣ್ಯದಲ್ಲಿ ಡಿಪೊ, ತಿಂಗಳೊಳಗೆ ಬಿ.ಸಿ.ರೋಡ್‌ನಲ್ಲಿ ಹೈಟೆಕ್ ಬಸ್ ನಿಲ್ದಾಣ

ಮಂಗಳೂರು, ಆ.7: ರಾಜ್ಯದಲ್ಲಿ ಶೀಘ್ರದಲ್ಲೇ 1,706 ನೂತನ ಬಸ್‌ಗಳನ್ನು ಕೆಎಸ್ಸಾರ್ಟಿಸಿ ವತಿಯಿಂದ ಓಡಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಗಮದ ಅಧಿಕಾರಿಗಳ ಹಾಗೂ ಜಿಲ್ಲಾ ಮಟ್ಟದ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂದರ್ಭದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈಗ ಇರುವ ಹಳೆಯ ಬಸ್ ಗಳ ಪೈಕಿ ಸುಮಾರು 800 ಬಸ್ಸುಗಳನ್ನು ಬದಲಾಯಿಸಿ ಹೊಸ ಬಸ್ ಓಡಿಸಲಾಗುವುದು. ಉಳಿದಂತೆ 121 ನರ್ಮ್ ಬಸ್ಸುಗಳನ್ನು ಓಡಿಸಲಾಗುವುದು. ಪ್ರಸಕ್ತ ಜಿಲ್ಲೆಯಲ್ಲಿ 21 ನರ್ಮ್ ಬಸ್ಸುಗಳು ಸಂಚರಿಸುತ್ತಿವೆ. ಇನ್ನೂ 14 ಬಸ್ಸುಗಳು ಸಂಚಾರ ಮಾಡಲು ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಮಂಗಳೂರು ವಿಭಾಗದಲ್ಲಿ 145 ಬಸ್‌ಗಳನ್ನು ಓಡಿಸಲು ಅನುಮತಿ ಕೋರಲಾಗಿದೆ. 30 ಬಸ್‌ಗಳು ಈಗಾಗಲೇ ಸಂಚಾರ ನಡೆಸುತ್ತಿವೆ ಎಂದು ಗೋಪಾಲ ಪೂಜಾರಿ ಹೇಳಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಕೆಎಸ್ಸಾರ್ಟಿಸಿ ಡಿಪೊ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಎಸ್ಸಾರ್ಟಿಸಿ ಡಿಪೋ ಆರಂಭಿಸುವ ಚಿಂತನೆ ಇದೆ ಎಂದು ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಬಿ.ಸಿ.ರೋಡ್‌ನಲ್ಲಿ ಹೈಟೆಕ್ ಬಸ್ಸು ನಿಲ್ದಾಣ ತಿಂಗಳೊಳಗೆ ಪೂರ್ಣ:- ಬಿ.ಸಿ ರೋಡಿನಲ್ಲಿ ಹೈಟೆಕ್ ಬಸ್ ನಿಲ್ದಾಣ ಮುಂದಿನ ಒಂದು ತಿಂಗಳ ಒಳಗೆ ಪೂರ್ಣಗೊಳ್ಳಲಿದೆ. ಸುರತ್ಕಲ್‌ನಲ್ಲಿಯೂ ಜಾಗ ನೀಡಿದರೆ ಬಸ್ಸು ಡಿಪೋ ತೆರೆಯುವ ಉದ್ದೇಶ ಇದೆ. ಮಂಗಳೂರಿನಲ್ಲಿ ಒಂದು ಘಟಕ ಇದೆ ಇನ್ನೊಂದು ಘಟಕ ಆರಂಬಿಸಲು ನಿಗಮ ಸಿದ್ಧವಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ತಿಳಿಸಿದ್ದಾರೆ.
ಒಂದು ರೂಪಾಯಿಗೆ ಒಂದು ಲೀಟರ್ ನೀರು:- ರಾಜ್ಯದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲೂ ರೈಲು ನಿಲ್ದಾಣದಲ್ಲಿ ನೀಡುವಂತೆ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈ ಗೊಳ್ಳಲಾಗುವುದು. ಪ್ರಯಾಣಿಕರಿಗೆ ವೈಫೈ ಸೌಲಭ್ಯ, ಪತ್ರಿಕೆ, ಕುಡಿಯಲು ಒಂದು ರೂಪಾಯಿಗೆ ಒಂದು ಲೀಟರ್ ಶುದ್ಧ ಕುಡಿಯುವ ನೀರು ನೀಡುವ ಸೌಲಭ್ಯಗಳನ್ನು ಪ್ರಯಾಣಿಕರಿಗೆ ನೀಡಲು ಕ್ರಮ ಕೈ ಗೊಳ್ಳಲಾಗುವುದು ಎಂದು ಉಮಾಶಂಕರ್ ತಿಳಿಸಿದ್ದಾರೆ.
ನಗರ ಮತ್ತು ಮಹಾನಗರ ವ್ಯಾಪ್ತಿಯಲ್ಲಿ 23,000 ಬಸ್ಸುಗಳು ಓಡುತ್ತಿವೆ. ಗ್ರಾಮೀಣ ಪ್ರದೇಶದ 9 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ 18500 ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್ ನೀಡಲಾಗಿದೆ . ಕೆಎಸ್ಸಾರ್ಟಿಸಿ ವಾರ್ಷಿಕ 104 ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಸಂಸ್ಥೆಯಾಗಿದೆ ಎಂದು ಉಮಾಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.







