ಆ.15ರೊಳಗೆ ಹೊಸ ಪಡಿತರ ಚೀಟಿ ಅರ್ಜಿಗಳ ಪರಿಶೀಲನೆ: ಯು.ಟಿ.ಖಾದರ್

ಬೆಂಗಳೂರು, ಆ. 7: ಪಡಿತರ ಚೀಟಿಗಾಗಿ ರಾಜ್ಯದಲ್ಲಿ 16ಲಕ್ಷ ಹೊಸ ಅರ್ಜಿಗಳು ಬಂದಿದ್ದು, ಆ ಪೈಕಿ 2.50ಲಕ್ಷ ಹೊಸ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗಿದೆ. ಉಳಿದ ಎಲ್ಲ ಅರ್ಜಿಗಳನ್ನು ಆ.15ರೊಳಗಾಗಿ ಪರಿಶೀಲನೆ ನಡೆಸಿ ಶೀಘ್ರದಲ್ಲೆ ಅರ್ಹ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ ರವಾನಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸೋಮವಾರ ವಿಕಾಸ ಸೌಧದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೊಸ ಪಡಿತರ ಚೀಟಿ ಕೋರಿ ಬಂದಿರುವ ಅರ್ಜಿಗಳ ಪರಿಶೀಲನೆ ಸಂಬಂಧ ತನ್ನ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ನಗರದ ಶಾಸಕರು ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ಅವರು ಮಾತನಾಡುತ್ತಿದ್ದರು.
ಅರ್ಜಿಗಳ ಪರಿಶೀಲನೆ ಬಳಿಕ ಪಡಿತರ ಚೀಟಿ ಮುದ್ರಿಸಿ ನೇರವಾಗಿ ಸ್ಪೀಡ್ ಪೋಸ್ಟ್ ಮೂಲಕ ಫಲಾನುಭವಿಯ ಮನೆ ಬಾಗಿಲಿಗೆ ಕಾರ್ಡ್ ಮುಟ್ಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ನಕಲಿ ಪಡಿತರ ಚೀಟಿಗೆ ಶಾಶ್ವತ ಕಡಿವಾಣ ಹಾಗೂ ಬಡವರ ಅಲೆದಾಟ ತಪ್ಪಿಸಲು ಸರಕಾರ ಹೊಸ ಕ್ರಮ ಕೈಗೊಂಡಿದೆ ಎಂದರು.
1.50 ಲಕ್ಷ ಅರ್ಜಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಡಿತರ ಚೀಟಿಗಾಗಿ 1.50 ಲಕ್ಷ ಅರ್ಜಿಗಳು ಬಂದಿದ್ದು, ಪರಿಶೀಲನೆ ಕಾರ್ಯಕ್ಕೆ ಬೆಂಗಳೂರಿನಲ್ಲಿ ಸಿಬ್ಬಂದಿ ಕೊರತೆ ಇದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಕಂದಾಯ, ತೆರಿಗೆ ವಿಭಾಗದ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
198 ವಾರ್ಡ್‌ಗಳಲ್ಲಿನ ಕಂದಾಯ ಮತ್ತು ತೆರಿಗೆ ವಿಭಾಗದ ಸಿಬ್ಬಂದಿ ಹೊಸ ಪಡಿತರ ಚೀಟಿಗೆ ಬಂದ ಅರ್ಜಿಗಳ ಪರಿಶೀಲನೆಗೆ ಈಗಾಗಲೇ ಆದೇಶ ಹೊರಡಿಸಿದ್ದು, ಇನ್ನು ಹತ್ತು ದಿನಗಳಲ್ಲಿ 1.50ಲಕ್ಷ ಅರ್ಜಿಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಇಲಾಖೆ ಅರ್ಹ ಫಲಾನುಭವಿಗಳಿಗೆ ನೇರವಾಗಿ ಕಾರ್ಡ್ ರವಾನಿಸಲು ಕ್ರಮ ವಹಿಸದೆ ಎಂದು ಖಾದರ್ ತಿಳಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಆದರೂ ಕೇಂದ್ರ ಅಡುಗೆ ಅನಿಲ ಬೆಲೆ ಇಳಿಕೆ ಮಾಡಿಲ್ಲ. ಸಬ್ಸಿಡಿಯನ್ನು ಪಾವತಿಸದೆ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದ ಅವರು, ‘ಉಜ್ವಲ’ ಯೋಜನೆಯಡಿ ಉಚಿತ ಸಂಪರ್ಕ ಕಲ್ಪಿಸುವ ನೆಪದಲ್ಲಿ ಸಿಲಿಂಡರ್ ಮತ್ತು ಸ್ಟೌವ್ ನೀಡಿ ಹಣ ವಸೂಲಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.







