ಆಧಾರ್ ಇರದ 37 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಇಲ್ಲ !

ಹೊಸದಿಲ್ಲಿ, ಆ. 7: ಇದುವರೆಗೆ ಆಧಾರ್ ನಂಬರ್ ಪಡೆಯದೆ ಇರುವುದರಿಂದ ರಾಜಸ್ತಾನದ 49 ಸಾವಿರಕ್ಕೂ ಹೆಚ್ಚಿನ ಸರಕಾರಿ ಶಾಲೆಗಳ ಸುಮಾರು 37 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದಿಂದ ವಂಚಿತರಾಗಲಿದ್ದಾರೆ. ರಾಜ್ಯದಲ್ಲಿ ಶೇ. 45 ವಿದ್ಯಾರ್ಥಿಗಳು ಆಧಾರ್ ಹೊಂದಿದ್ದಾರೆ. ಆಧಾರ್ ನೋಂದಣಿ ಮಾಡಲು ಆಗಸ್ಟ್ 31 ಅಂತಿಮ ಗಡು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಜಸ್ತಾನದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಶೇ. 100 ಆಧಾರ್ ನೋಂದಣಿ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಜಸ್ತಾನದ ಮುಖ್ಯ ಕಾರ್ಯದರ್ಶಿಗೆ ಪತ್ರದಲ್ಲಿ ತಿಳಿಸಿದೆ. 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗೆ ಸಚಿವಾಲಯ ಪತ್ರ ಬರೆದು ಆಧಾರ್ ಬಗ್ಗೆ ವಿಚಾರಿಸಿದೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟದಂತಹ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಫೆಬ್ರವರಿ 28ರ ಅಧಿಸೂಚನೆ ಹೊರಡಿಸಿತ್ತು. ಈ ಸಂದರ್ಭ ಮಕ್ಕಳು ಹಾಗೂ ಹೆತ್ತವರು ಆಧಾರ್ ಕಾರ್ಡ್ ಪಡೆಯಲು ಜೂನ್ 30ರ ವರೆಗೆ ಅವಕಾಶ ನೀಡಿತ್ತು.





