ಸಂಸ್ಕೃತ ಕಲಿಯುವ ಮಕ್ಕಳ ಸಂಖ್ಯೆ ಇಳಿಮುಖ: ಡಾ.ನಾರಾಯಣ

ಉಡುಪಿ, ಆ.7: ಇಂದು ಜಗತ್ತಿನಲ್ಲಿ ಸಂಸ್ಕೃತ ಕಲಿಯುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಅದೇ ರೀತಿ ಅತಿಯಾದ ತಾಂತ್ರಿಕತೆ ಮತ್ತು ಬದಲಾ ಗುತ್ತಿರುವ ಶಿಕ್ಷಣದ ಶೈಲಿಯಿಂದ ಸಂಸ್ಕೃತ ಅಧ್ಯಯನಕಾರರ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ ಎಂದು ತಿರುಪತಿ ಆರ್.ಎಸ್.ವಿದ್ಯಾಪೀಠದ ದ್ವೈತವೇದಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾರಾಯಣ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಸಂಸ್ಕೃತೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಶಿಕ್ಷಣ ಎಂಬುದು ಜ್ಞಾನ. ಸಂಸ್ಕೃತ ಭಾಷೆಯಿಂದ ಸಾಕಷ್ಟು ಜ್ಞಾನವನ್ನು ಹೆಚ್ಚಿಸಿ ಕೊಳ್ಳಬಹುದು. ಆದರೆ ಇಂದಿನ ವಿದ್ಯಾರ್ಥಿಗಳು ಜ್ಞಾನಕ್ಕಾಗಿ ಶಿಕ್ಷಣ ಪಡೆಯು ತ್ತಿಲ್ಲ. ಆದುದರಿಂದ ಸಂಸ್ಕೃತ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದ ರಿಂದ ಸಾಮಾಜಿಕ ವೌಲ್ಯಗಳು ಕೂಡ ಕುಸಿಯುತ್ತಿವೆ ಎಂದ ಅವರು, ವೈಜ್ಞಾನಿಕ ಬಾಷೆಯ ಉಚ್ಛಾರ ಸಂಸ್ಕೃತ ಭಾಷೆಯಲ್ಲಿದೆ. ಹಾಗಾಗಿ ವಿಜ್ಞಾನ ಮತ್ತು ಸಂಸ್ಕೃತ ಭಾಷೆಯನ್ನು ಸಮಾನವಾಗಿ ಭೋದನೆ ಮಾಡಬೇಕು ಎಂದರು.
ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅದಮಾರು ಶ್ರೀವಿಶ್ವ ಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಕೃತ ಭಾಷೆಯ ಹಿನ್ನೆಲೆ ಯಿಂದ ಸಂಸ್ಕಾರದಿಂದ ಕೂಡಿದ ಮಾತು ಬರಲು ಸಾಧ್ಯವಾಗುತ್ತದೆ. ಸಂಸ್ಕೃತವು ಸರ್ವ ಕಾಲಕ್ಕೂ ಶ್ರೇಷ್ಠವಾಗಿ ಉಳಿಯುವ ಭಾಷೆಯಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿ ದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಟಿ.ಎಸ್. ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀದೇವಿ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.







