ಕನ್ನಡ ವಿರೋಧಿ ನೀತಿಯ ವಿರುದ್ಧ ಆಂದೋಲನ

ಚಿಕ್ಕಬಳ್ಳಾಪುರ, ಆ.7: ತ್ರೀಭಾಷ ಸೂತ್ರದ ಅನ್ವಯ ಕನ್ನಡದಲ್ಲಿ ಬ್ಯಾಂಕ್ ವ್ಯವಹಾರವನ್ನು ನಡೆಸಲು ಆಗ್ರಹಿಸಿ ರೇಷ್ಮೆ ಹಿರತಕ್ಷಣಾ ವೇದಿಕೆ, ರೈತ ಸಂಘ ಹಾಗೂ ಕರವೇ ಯುವ ಸೇನೆಯ ಕಾರ್ಯಕರ್ತರು ನಗರದ ಹಲವು ಬ್ಯಾಂಕ್‌ಗಳಲ್ಲಿನ ಅನ್ಯಭಾಷಾ ಚಲನ್ ಹರಿಯುವ ಆಂದೋಲನ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ ಹಿರತಕ್ಷಣಾ ವೇದಿಕೆಯ ಯಲುವಹಳ್ಳಿ ಸೊಣ್ಣೇಗೌಡ, ಬ್ಯಾಂಕ್‌ಗಳಲ್ಲಿ ಬೇಡಿಕೆ ಹುಂಡಿ, ಖಾತೆ ತೆರೆಯುವ ಅರ್ಜಿ ನಮೂನೆ ಚಲನ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದಾಗಿ ಆಕ್ರೋಷ ವ್ಯಕ್ತಪಡಿಸಿದರು.
ಬ್ಯಾಂಕ್‌ಗಳು ತ್ರಿಭಾಷಾ ಸೂತ್ರದ ಅನ್ವಯ ಆಯಾ ರಾಜ್ಯಗಳಲ್ಲಿನ ಭಾಷೆಯನ್ನು ಪ್ರಧಾನವಾಗಿ ಬಳಸಬೇಕಿದೆ. ಉಳಿದಂತೆ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯನ್ನು ನಂತರ ಬಳಸಿಕೊಳ್ಳಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನೂ ಉಲ್ಲಂಘಿಸಿ ಕೇವಲ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯನ್ನು ಬಳಕೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ ಅವರು ಇದರಿಂದ ಕನ್ನಡಿಗರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುತೇಕ ಬ್ಯಾಂಕ್‌ಗಳಲ್ಲಿ ಅನ್ಯ ರಾಜ್ಯದ ಸಿಬ್ಬಂದಿ ನೇಮಕ ಮಾಡುವ ಮೂಲಕ ಕನ್ನಡಿಗರನ್ನು ನಿರ್ಲಕ್ಷಿಸಲಾಗುತ್ತಿದೆ. ಅಲ್ಲದೆ 2015ರ ನೇಮಕಾತಿ ನಿಯಮದನ್ವಯ ಬ್ಯಾಂಕ್‌ಗಳಲ್ಲಿ ನೇಮಕಗೊಂಡ ಅಧಿಕಾರಿ ಮತ್ತು ಸಿಬ್ಬಂದಿವರ್ಗ 6 ತಿಂಗಳೊಳಗಾಗಿ ಆಯಾ ರಾಜ್ಯದ ಭಾಷೆಯನ್ನು ಕಲಿತು ವ್ಯವಹರಿಸಬೇಕೆಂದು ರೂಪಿಸಿರುವ ಆದೇಶವನ್ನೂ ಧಿಕ್ಕರಿಸಲಾಗಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕಳೆದ ಆ.11 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು 15 ದಿನಗಳಲ್ಲಿ ಕನ್ನಡದಲ್ಲಿಯೇ ಬ್ಯಾಂಕ್‌ಗಳಲ್ಲಿ ವ್ಯವಹರಿಸುಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರೂ, ಆದೇಶವನ್ನೂ ಲೆಕ್ಕಸದೇ ಹಿಂದಿ ಹಾಗೂ ಇಂಗ್ಲೀಷ್ ವ್ಯವಹರಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಈ ಕೂಡಲೇ ಬ್ಯಾಂಕ್‌ಗಳಲ್ಲಿ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದನ್ವಯ ಕನ್ನಡವನ್ನು ಪ್ರಧಾನವಾಗಿ ಬಳಸಲು ಮತ್ತು ಅನ್ಯರಾಜ್ಯಗಳ ಸಿಬ್ಬಂದಿ ವರ್ಗವು ಕನ್ನಡ ಭಾಷೆ ಕಲಿತು ಕನ್ನಡದಲ್ಲೇ ವ್ಯವಹರಿಸಲು ಮುಂದಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕನ್ನಡ ವಿರೋಧಿ ಸಿಬ್ಬಂದಿಯನ್ನು ಹೊರದಬ್ಬುವ ಚಳುವಳಿಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಕನ್ನಡದಲ್ಲಿ ಬ್ಯಾಂಕ್ ವ್ಯವಹಾರವನ್ನು ನಡೆಸಲು ಆಗ್ರಹಿಸಿ ಎಸ್‌ಬಿಐ, ಕೆನರಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳ ಅನ್ಯಭಾಷಾ ಚಲನ್‌ಗಳನ್ನು ಹರಿಯುವ ಮೂಲಕ ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕ್ಷ್ಮಣರೆಡ್ಡಿ, ರಾಮಾಂಜಿನಪ್ಪ, ಮಂಜುನಾಥ್, ಶ್ರೀನಿವಾಸ್, ಮುರಳಿ, ಪುಟ್ಟಮೂರ್ತಿ, ದೇವರಾಜ್, ಶ್ರೀಮೂರ್ತಿ, ನಾರಾಯಣಸ್ವಾಮಿ, ನರಸಿಂಹಮೂರ್ತಿ, ರಾಮಚಂದ್ರಪ್ಪ ಶ್ರೀರಾಮ್, ಕರವೇ ಯುವ ಸೇನೆಯ ರಾಮೇಗೌಡ ಸೇರಿದಂತೆ ಮತ್ತಿತರರು ಇದ್ದರು.







