ಸಿಆರ್‌ಪಿಎಫ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ: ಆರೋಪ

ರಾಜ್‌ಪುರ, ಆ. 8: ದಾಂತೇವಾಡದ ಮಾವೋವಾದಿ ಪ್ರಭಾವಿತ ಸರಕಾರಿ ಹಾಸ್ಟೆಲ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಶಾಲಾ ಮಕ್ಕಳಿಗೆ ಸಿಆರ್‌ಪಿಎಫ್ ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸಲ್ಲಿಸಲಾದ ದೂರೊಂದರ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದಾಂತೆವಾಡದ ಜಿಲ್ಲಾ ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಪಾಲ್ನಾರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ವಾರ್ಡನ್ ದೂರು ಸಲ್ಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಮವಸ್ತ್ರದಲ್ಲಿದ್ದ ಅಪರಿಚಿತ ವ್ಯಕ್ತಿಯ ಬಗ್ಗೆ ನಾವು ವಾರ್ಡನ್‌ನಿಂದ ದೂರು ಸ್ವೀಕರಿಸಿದ್ದೇವೆ ಹಾಗೂ ತನಿಖೆ ಆರಂಭಿಸಿದ್ದೇವೆ ಎಂದು ದಾಂತೆವಾಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.
ಕುವಾಕುಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಗಂಭೀರ ವಿಚಾರ. ಸಮರ್ಪಕ ತನಿಖೆ ನಡೆಸಲಾಗುವುದು. ಬಾಲಕಿಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಗುರುತಿಸಲಾಗುವುದು ಎಂದು ಅವರು ಹೇಳಿದರು.
ಹೋರಾಟಗಾರ ಹಿಮಾಂಶು ಕುಮಾರ್ ಎಂಬವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಬರೆದುಕೊಂಡ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.





