ಸಂಬಂಧ ಸುಧಾರಣೆಯಲ್ಲಿ ಭಾರತಕ್ಕೆ ಆಸಕ್ತಿಯಿಲ್ಲ: ಪಾಕ್ ನೂತನ ವಿದೇಶ ಸಚಿವ

ಇಸ್ಲಾಮಾಬಾದ್, ಆ. 7: ಪಾಕಿಸ್ತಾನದ ಹಲವು ಪ್ರಯತ್ನಗಳ ಹೊರತಾಗಿಯೂ, ಸಂಬಂಧ ಸುಧಾರಣೆಗೆ ಭಾರತ ಧನಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಪಾಕಿಸ್ತಾನದ ನೂತನ ವಿದೇಶ ಸಚಿವ ಖವಾಜ ಮುಹಮ್ಮದ್ ಆಸಿಫ್ ಹೇಳಿದ್ದಾರೆ ಹಾಗೂ ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಬುಡಮೇಲು ಮಾಡಲು ಭಾರತ ಅಮೆರಿಕದ ಜೊತೆಗೂಡಿ ಪಿತೂರಿ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
‘‘ನೆರೆಯ ದೇಶಗಳೊಂದಿಗೆ, ಅದರಲ್ಲೂ ಮುಖ್ಯವಾಗಿ ಭಾರತ ಮತ್ತು ಅಫ್ಘಾನಿಸ್ತಾನಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪಾಕಿಸ್ತಾನ ಯಾವತ್ತೂ ಬಯಸಿದೆ. ಆದರೆ, ವಲಯದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಪಾಕಿಸ್ತಾನದ ಉಪಕ್ರಮಗಳಿಗೆ ಎರಡೂ ದೇಶಗಳು ಯಾವುದೇ ಧನಾತ್ಮಕ ಪ್ರತಿಕ್ರಿಯೆಯನ್ನು ನೀಡಿಲ್ಲ’’ ಎಂದು ಅವರು ಹೇಳಿದರು.
ವಿದೇಶ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಇಲ್ಲಿನ ಪಿಎಮ್‌ಎಲ್-ಎನ್ ಹೌಸ್‌ನಲ್ಲಿ ತನ್ನ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ಆಸಿಫ್ ಹೇಳಿದರು.
ನೆರೆಯ ದೇಶಗಳೊಂದಿಗೆ ಶಾಂತಿ ಮತ್ತು ಉತ್ತಮ ಸಂಬಂಧವನ್ನು ಬಯಸುವ ಪಾಕಿಸ್ತಾನದ ಬಯಕೆಯನ್ನು ಅದರ ದೌರ್ಬಲ್ಯ ಎಂಬುದಾಗಿ ಯಾರೂ ಪರಿಗಣಿಸಬಾರದು ಎಂದೂ ಅವರು ಹೇಳಿದರು.
ಪಾಕಿಸ್ತಾನವನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸ್ಥಿರಗೊಳಿಸಲು ಅದರ ವಿರುದ್ಧ ಅಫ್ಘಾನಿಸ್ತಾನ ರೂಪಿಸಿರುವ ಪಿತೂರಿಗಳಿಗೆ ಭಾರತ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿದರು.







