ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗೆ ದೇವಸ್ಥಾನದ ದುಡ್ಡು: ಆದೇಶ ರದ್ದು ಪಡಿಸಿದ ಸರಕಾರ

ಬೆಂಗಳೂರು, ಆ. 7: ನಿಯಮಗಳನ್ನು ಮೀರಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ದತ್ತು ಪಡೆದು ಅನುದಾನಗಿಟ್ಟಿಸಿಕೊಳ್ಳುತ್ತಿದ್ದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನಡೆಸುವ ಶ್ರೀ ರಾಮಕೇಂದ್ರ ಹಾಗೂ ಶ್ರೀ ದೇವಿ ವಿದ್ಯಾಕೇಂದ್ರದ ದತ್ತು ಆದೇಶವನ್ನು ರಾಜ್ಯ ಸರಕಾರ ರದ್ದು ಪಡಿಸಿದೆ.
ದೇವಸ್ಥಾನದ ವತಿಯಿಂದ ದತ್ತು ಪಡೆದು ಈವರೆಗೆ ಸುಮಾರು ಮೂರು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪ್ರಭಾಕರ ಭಟ್ಟರ ಸಂಸ್ಥೆ ಅಕ್ರಮವಾಗಿ ಅನುದಾನ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
'ಸದರಿ ಶಿಕ್ಷಣ ಸಂಸ್ಥೆಗಳಿಗೆ 2007-08ನೆ ಸಾಲಿನಿಂದ 2016-17ಮೇ ವರೆಗೆ ಒಟ್ಟಾರೆಯಾಗಿ 2,83,25,424 ರೂ. ಖರ್ಚು ಮಾಡಲಾಗಿದೆ. ಆದರೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮಗಳಲ್ಲಿ ಈ ರೀತಿ ದೇವಾಲಯದ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ತೆಗೆದುಕೊಂಡು ನಿರ್ವಹಿಸಲು ಅವಕಾಶವಿರುವುದಿಲ್ಲ. ಹೀಗೆ ದೇವಾಲಯದ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ತೆಗೆದುಕೊಂಡು ನಿರ್ವಹಣೆ ಮಾಡುವುದು ದೇವಾಲಯಕ್ಕೆ ಆರ್ಥಿಕ ಹೊರೆಯಾಗುತ್ತದೆ' ಎಂದು ಸರಕಾರದ ಪ್ರಕಟಣೆ ತಿಳಿಸಿದೆ.
ಆದುದರಿಂದ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಮತ್ತು ಶ್ರೀ ದೇವಿ ವಿದ್ಯಾಕೇಂದ್ರ ಪುಣಚ, ಬಂಟ್ವಾಳ ಪ್ರೌಢ ಶಾಲೆಗಳನ್ನು ದತ್ತು ತೆಗೆದುಕೊಂಡು ಹೊರಡಿಸಿರುವ ಸರಕಾರದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ರದ್ದುಗೊಳಿಸಲಾಗಿದೆ ಎಂದು ಸರಕಾರದ ಪ್ರಕಟನೆ ತಿಳಿಸಿದೆ.









