ರಸ್ತೆಬದಿ ವ್ಯಾಪಾರಿಗಳ ಧರಣಿ

ಮಂಡ್ಯ, ಆ.7: ತಮ್ಮನ್ನು ತೆರವುಗೊಳಿಸಿರುವ ಪೊಲೀಸರ ಕ್ರಮ ಖಂಡಿಸಿ ರಸ್ತೆಬದಿ ವ್ಯಾಪಾರಿಗಳು ಸೋಮವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಗಾಂಧಿ ಪಾರ್ಕ್‌ನಿಂದ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಸಿ ಧರಣಿ ನಡೆಸಿದ ಅವರು, ಪೊಲೀಸರು ತಮ್ಮನ್ನು ಏಕಾಏಕಿ ತೆರವುಗೊಳಿಸಿರುವುದು ನಿಯಮ ಬಾಹಿರ ಕ್ರಮ ಎಂದು ದೂರಿದರು.
ನಗರದಲ್ಲಿ ಸುಮಾರು 110 ಕುಟುಂಬಗಳು ಬೀದಿಬದಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಗುರುತಿನ ಚೀಟಿ ಸಹ ನೀಡಲಾಗಿದೆ. ಆದರೂ, ಸಂಚಾರ ಸುಧಾರಣೆ ನೆಪದಲ್ಲಿ ಟ್ರಾಫಿಕ್ ಪೊಲೀಸರು ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಅವರು ಕಿಡಿಕಾರಿದರು.
ರಸ್ತೆಬದಿ ವ್ಯಾಪಾರಿಗಳನ್ನು ಅಕ್ರಮವಾಗಿ ಒಕ್ಕಲೆಬ್ಬಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಬದಲಿಗೆ ಪರ್ಯಾಯ ವ್ಯಾಪಾರಿ ವಲಯ ಗುರುತಿಸಿ ಸೂಕ್ತ ಪುನರ್‌ವಸತಿ ಕಲ್ಪಿಸಿದ ನಂತರವಷ್ಟೆ ತೆರವುಗೊಳಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಕಾನೂನನ್ನು ಗಾಳಿಗೆ ತೂರಿ ಏಕಾಏಕಿ ಕಾರ್ಯಾಚರಣೆಗೆ ಮುಂದಾಗಿರುವುದು ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕಿನ ಮೇಲಿನ ದಾಳಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೀದಿಬದಿ ವ್ಯಾಪಾರಕ್ಕೂ ಜನಸಾಮಾನ್ಯರು, ರೈತರು, ಕೂಲಿ ಕಾರ್ಮಿಕರ ಬದುಕಿಗೂ ನೇರ ಪೂರಕ ಸಂಬಂಧಗಳಿವೆ. ಕಡಿಮೆ ದರಕ್ಕೆ ಆಹಾರ ಪದಾರ್ಥಗಳು ದೊರಕುವ ಕಾರಣಕ್ಕೆ ಜನಸಾಮಾನ್ಯರು ಸನಗರಗಳಲ್ಲಿ ಬದುಕು ನೀಗಿಸಲು ಸಾಧ್ಯವಾಗಿದೆ ಎಂದು ಅವರು ಹೇಳೀದರು. ನಗರಸಭೆಯಲ್ಲಿ ಜಂಟಿ ಸಭೆ ಆಯೋಜಿಸಿ ತೀರ್ಮಾನ ಕೈಗೊಳ್ಳಲು ಕ್ರಮವಹಿಸಬೇಕು. ಅಲ್ಲಿವರೆಗೂ ಯಾವುದೇ ರಸ್ತೆಬದಿ ವ್ಯಾಪಾರಿಗಳ ಎತ್ತಂಗಡಿ ಮುಂದಾಗಬಾರದು ಎಂದವರು ಆಗ್ರಹಿಸಿದರು.
ಮಂಡ್ಯ ನಗರ ರಸ್ತೆಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ರಮೇಶ್, ನವೀನ, ರಘು, ದಿವಾಕರ್, ಮಹದೇವಸ್ವಾಮಿ, ವೆಂಕಟೇಶ್, ಚಂದ್ರಶೇಖರ್, ಶಿವಣ್ಣ, ಅಭಿಗೌಡ, ಮಧು, ಶ್ಯಾಂ, ಸಿದ್ದರಾಜು, ನಂದೀಶ, ಕುಮಾರ, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.







