ಜುಲನ್ ಗೋಸ್ವಾಮಿಗೆ ಏರ್ ಇಂಡಿಯಾ ಗೌರವ

ಕೋಲ್ಕತಾ, ಆ.7: ಭಾರತದ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಜುಲನ್ ಗೋಸ್ವಾಮಿಗೆ ಏರ್ ಇಂಡಿಯಾ ಸೋಮವಾರ ನಗರದ ಪೂರ್ವ ವಲಯದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಮರಣಿಕೆ ಹಾಗೂ 50,000 ರೂ. ಚೆಕ್ ನೀಡಿ ಗೌರವಿಸಿತು.
ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೆ ತಲುಪಲು ಪ್ರಮುಖ ಪಾತ್ರವಹಿಸಿದ್ದ ಜುಲನ್‌ಗೆ ಏರ್ ಇಂಡಿಯಾದ ಪೂರ್ವ ವಲಯದ ಪ್ರಾದೇಶಿಕ ನಿರ್ದೇಶಕ ಕ್ಯಾಪ್ಟನ್ ರೋಹಿತ್ ಭಾಸಿನ್ ಗೌರವಿಸಿದರು.
ಮಿಥಾಲಿರಾಜ್ ನೇತೃತ್ವದ ಭಾರತದ ಮಹಿಳಾ ತಂಡ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಸೋತಿದ್ದರೂ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರವಾಗಿತ್ತು. ಮಿಥಾಲಿ ರಾಜ್ ನಾಯಕತ್ವದಲ್ಲಿ 2005ರ ಬಳಿಕ ಎರಡನೆ ಬಾರಿ ವಿಶ್ವಕಪ್ ಫೈನಲ್‌ಗೆ ತಲುಪಿದ ಸಾಧನೆ ಮಾಡಿತ್ತು. ಜುಲನ್ ಹಾಗೂ ಮಿಥಾಲಿ ಮಾತ್ರ ಎರಡು ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ವರ್ಷದ ವಿಶ್ವಕಪ್‌ನಲ್ಲಿ ಮಿಥಾಲಿ 9 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಉರುಳಿಸಿದ್ದರು.
‘‘ನನ್ನ ಯಶಸ್ಸಿನ ಹಿಂದೆ ಏರ್ ಇಂಡಿಯಾ ಸಂಸ್ಥೆ ಮಹತ್ವದ ಪಾತ್ರ ನಿರ್ವಹಿಸಿದೆ. ಈ ಸಂಸ್ಥೆಯ ಕೊಡುಗೆಯನ್ನು ಸದಾ ಕಾಲ ಸ್ಮರಿಸುವೆ. ಭಾರತದ ಕ್ರೀಡಾಲೋಕದ ಇತರ ಆಟಗಾರರಿಗೆ ಏರ್ ಇಂಡಿಯಾ ಬೆಂಬಲಕ್ಕೆ ನಿಂತಿದೆ’’ಎಂದು ಜುಲನ್ ಹೇಳಿದ್ದಾರೆ.





