ಐಸಿಸಿ ರ‍್ಯಾಂಕಿಂಗ್: ಜಡೇಜ ವಿಶ್ವದ ನಂ.1 ಆಲ್‌ರೌಂಡರ್

ಹೊಸದಿಲ್ಲಿ, ಆ.8: ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಶ್ರೀಲಂಕಾ ವಿರುದ್ಧ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುವುದರಿಂದ ವಂಚಿತರಾಗಿರುವ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಗೆ ಸಿಹಿ ಸುದ್ದಿಯೊಂದು ಬಂದಿದೆ. ಅವರು ಐಸಿಸಿ ನಂ.1 ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದಾರೆ.
ಈಗಾಗಲೇ ನಂ.1 ಟೆಸ್ಟ್ ಬೌಲರ್ ಆಗಿರುವ 28ರ ಹರೆಯದ ಜಡೇಜ ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ.
ಕೊಲಂಬೊ ದಲ್ಲಿ ರವಿವಾರ ಕೊನೆಗೊಂಡ ಎರಡನೆ ಟೆಸ್ಟ್ ನಲ್ಲಿ ಅಜೇಯ 70 ರನ್ ಹಾಗೂ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಜಡೇಜ ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್‌ರನ್ನು ಹಿಂದಿಕ್ಕಿ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.
ಕೊಲಂಬೊದ ಎಸ್‌ಎಸ್‌ಸಿ ಮೈದಾನದಲ್ಲಿ ತಾನಾಡಿದ್ದ 32ನೆ ಟೆಸ್ಟ್‌ನಲ್ಲಿ ಜಡೇಜ 150ನೆ ವಿಕೆಟ್‌ಗಳನ್ನು ಪೂರೈಸಿದ್ದರು.
24 ತಿಂಗಳೊಳಗೆ ಆರು ಡಿಮೆರಿಟ್ ಅಂಕ ಪಡೆದಿದ್ದ ಜಡೇಜ ಐಸಿಸಿಯಿಂದ ಒಂದು ಟೆಸ್ಟ್ ಪಂದ್ಯದಿಂದ ಅಮಾನತುಗೊಂಡಿದ್ದರು. ಕೊಲಂಬೊ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ತನ್ನ 50ನೆ ಟೆಸ್ಟ್‌ನಲ್ಲಿ 133 ರನ್ ಗಳಿಸಿದ್ದ ಪೂಜಾರ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೂರನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. 132 ರನ್ ಗಳಿಸಿದ್ದ ಮುಂಬೈ ಬ್ಯಾಟ್ಸ್‌ಮನ್ ರಹಾನೆ 11 ಸ್ಥಾನ ಭಡ್ತಿ ಪಡೆದು ಐದನೆ ಸ್ಥಾನಕ್ಕೆ ತಲುಪಿದ್ದಾರೆ.
ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ದಿಮಾನ್ ಸಹಾ ನಾಲ್ಕು ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 44ನೆ ಸ್ಥಾನ ತಲುಪಿದ್ದಾರೆ. ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಮುಹಮ್ಮದ್ ಶಮಿ(20ನೆ ಸ್ಥಾನ) ಹಾಗೂ ಉಮೇಶ್ ಯಾದವ್(22ನೆ) ರ‍್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.
ಮೊಯಿನ್ ಅಲಿ ‘ಜೀವನಶ್ರೇಷ್ಠ’ಸಾಧನೆ
ಸೋಮವಾರ ನಡೆದಿದ್ದ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ಬ್ಯಾಟ್ಸ್ ಮನ್, ಬೌಲರ್ ಹಾಗೂ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
14 ಹಾಗೂ ಅಜೇಯ 75 ರನ್ ಗಳಿಸಿದ್ದ ಅಲಿ ಬ್ಯಾಟ್ಸ್‌ಮನ್ ರ‍್ಯಾಂಕಿಂಗ್‌ನಲ್ಲಿ 3 ಸ್ಥಾನ ಭಡ್ತಿ ಪಡೆದು 21ನೆ ಸ್ಥಾನ ತಲುಪಿದರು. 4ನೆ ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳನ್ನು ಪಡೆದಿದ್ದ ಅಲಿ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 18ನೆ ಸ್ಥಾನ ಹಾಗೂ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಸ್ಥಿರ ಪ್ರದರ್ಶನದ ಹಿನ್ನೆಲೆಯಲ್ಲಿ ಅಲಿ ರ‍್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ಅಲಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 250 ರನ್ ಹಾಗೂ 25 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಗೆ ದಕ್ಷಿಣ ಆಫ್ರಿಕದ ಮೊರ್ಕೆಲ್‌ರೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿ ಹಂಚಿಕೊಂಡಿದ್ದಾರೆ.







