ರೋಟರಿ ಕ್ಲಬ್ ದೇರಳಕಟ್ಟೆ ವತಿಯಿಂದ ‘ಆಟಿಡೊಂಜಿ ದಿನ ’

ಉಳ್ಳಾಲ, ಆ. 9: ಕೃಷಿ ಪ್ರಧಾನ ತುಳುನಾಡಿನಲ್ಲಿ ಆಟಿ ತಿಂಗಳಿಗೆ ಮಹತ್ವವಿದ್ದು, ಕಷ್ಟಗಳನ್ನು ಕಳೆಯುವ ಸಲುವಾಗಿ ವಿವಿಧ ಸಂಪ್ರದಾಯಗಳನ್ನು ಆನುಸರಿಸುವ ಕಾಲವಾಗಿದ್ದು, ಅದನ್ನು ಮುಂದುವರಿಸುವ ಕಾರ್ಯ ಶ್ಲಾಘನೀಯ ಎಂದು ಲಯನೆಸ್ ಕ್ಲಬ್ ಜಿಲ್ಲಾ ಮಾಜಿ ಸಂಯೋಜಕಿ ವಿಜಯಲಕ್ಷ್ಮೀ ರೈ ಕಲ್ಲಿಮಾರು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ದೇರಳಕಟ್ಟೆ ವತಿಯಿಂದ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ರವಿಂದ್ರ ಕಲಾ ವೇದಿಕೆಯಲ್ಲಿ ನಡೆದ ‘ಆಟಿಡೊಂಜಿ ದಿನ ’ ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಆಟಿ ತಿಂಗಳಲ್ಲಿ ಕಷ್ಟ ಕೋಟೆಗಳನ್ನು ಕಳೆಯಲು ಆಟಿ ಕಳೆಂಜದ ಮೂಲಕ ದೇವರು ಬರುವ ಸಂಪ್ರದಾಯ, ಕಷ್ಟದ ಬದುಕನ್ನು ಸಾಗಿಸುವ ತಿಂಗಳಲ್ಲಿ ಪ್ರಕೃತಿಯಿಂದ ಸಿಗುವ ವಸ್ತುಗಳಿಂದ ಆಹಾರ ತಯಾರಿ. ಸೊಸೆಯನ್ನು ತವರು ಮನೆಗೆ ಕಳುಹಿಸುವ ಸಂಪ್ರದಾಯದಿಂದ ತಾಯಿ ಮಗಳ ಪ್ರೀತಿ ಮತ್ತೆ ನೆನಪಿಸುವುದರ ಜತೆಗೆ, ಸೊಸೆಗೂ ಅದೇ ರೀತಿಯ ಪ್ರೀತಿಯನ್ನು ಕೊಡಬೇಕಾದ ಜ್ಞಾನಾರ್ಜನೆಯೂ ಆಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ದೇರಳಕಟ್ಟೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿ ಮಾತನಾಡಿ ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ನಲ್ಲಿ ಇದೇ ಮೊದಲ ಬಾರಿಗೆ ಪ್ರಾದೇಶಿಕ ಆಚರಣೆಯನ್ನು ಮಾಡಲಾಗಿದೆ. ಸರೊಟೇರಿಯನ್ ಗಳು ಕೋಟು , ಸೂಟು ಬೂಟಿನಲ್ಲೇ ಉಳಿಯುತ್ತಾರೆ. ಆದರೆ ಆಟಿ ತಿಂಗಳ ಆಚರಣೆಯ ಮೂಲಕ ಎಲ್ಲರನ್ನು ತುಳುನಾಡಿನ ಸಂಸ್ಕೃತಿಯ ಲುಂಗಿಯನ್ನು ಉಡಿಸಲಾಗಿದೆ. ತುಳುನಾಡಿನ ವಿಶೀಷ್ಟ್ಯ ಖಾದ್ಯವನ್ನು ಎಲ್ಲರೂ ತಯಾರಿಸುವ ಜತೆಗೆ ಕುಟುಂಬ ಸಮ್ಮಿಲನದಲ್ಲಿ, ಎಲ್ಲಾ ಸದಸ್ಯರು ಸಂಭ್ರಮ ಆಚರಿಸಿದ್ದಾರೆ ಎಂದರು.
ಆಷಾಢದ ಆಹಾರದ ವಿವರಗಳನ್ನು ಸೌಮ್ಯ ಆರ್ ಶೆಟ್ಟಿ ನೀಡಿದರು. ಕ್ಲಬ್ ನ ಮಾಜಿ ಅಧ್ಯಕ್ಷ ಪಿ.ಡಿ.ಶೆಟ್ಟಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ನಿರ್ದೇಶಕ ಡಾ.ರವಿಶಂಕರ್ ರಾವ್ ಸ್ವಾಗತಿಸಿದರು. ಜಯಪ್ರಕಾಶ್ ರೈ ವರದಿ ವಾಚಿಸಿದರು. ಕೋಶಾಧಿಕಾರಿ ವಿಕ್ರಂ ದತ್ತಾ ಕಾರ್ಯಕ್ರಮ ನಿರೂಪಿಸಿದರು. ಡಾ. ಅನಂತನ್ ವಂದಿಸಿದರು.







