‘ಬರ’ ಮುಕ್ತ ಭಾರತಕ್ಕಾಗಿ ಆ.16ರಿಂದ ರಾಷ್ಟ್ರೀಯ ಜಲ ಸಮಾವೇಶ

ಬೆಂಗಳೂರು, ಆ. 9: ‘ಬರ-ಪ್ರವಾಹ’ ಮುಕ್ತ ಭಾರತಕ್ಕಾಗಿ ಆ.16ರಿಂದ ಮೂರು ದಿನಗಳ ಕಾಲ ವಿಜಯಪುರದ ಬಿಎಲ್‌ಡಿಇಎ ವಿಶ್ವ ವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಜಲ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಜಲ ತಜ್ಞ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಡಾ.ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯದಿಂದ ದೇಶದಲ್ಲಿ ಮಳೆಯ ಚಕ್ರವೇ ಸಂಪೂರ್ಣ ಬದಲಾಗಿದ್ದು, ಅಕಾಲಿಕ ಬರ ಹಾಗೂ ಪ್ರವಾಹ ಸ್ಥಿತಿ ಎದುರಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಳೆಯ ಚಕ್ರ ಸಂಪೂರ್ಣ ಬದಲಾಗಿದೆ. ಆದರೆ, ದೇಶದಲ್ಲಿನ ರೈತರ ಬೆಳೆ ಪದ್ಧತಿಯಲ್ಲಿ ಬದಲಾವಣೆ ಆಗಿಲ್ಲ. ಹೀಗಾಗಿ ರೈತರು ನಿರಂತರವಾಗಿ ನಷ್ಟ ಹಾಗೂ ಸಂಕಷ್ಟಕ್ಕೆ ಸಿಲುಕಬೇಕಾದ ದುಸ್ಥಿತಿ ಎದುರಾಗಿದೆ ಎಂದು ರಾಜೇಂದ್ರ ಸಿಂಗ್ ವಿವರಿಸಿದರು.
ಭ್ರಷ್ಟತೆಯ ಜೋಡೆ: ಕಳೆದಇಪ್ಪತ್ತು ವರ್ಷಗಳಿಂದ ನದಿ ಜೋಡಣೆ ವಿಷಯ ಕೇಳುತ್ತಿದ್ದೇವೆ. ಆದರೆ, ನದಿ ಜೋಡಣೆ ಜತೆಗೆ ಭ್ರಷ್ಟತೆಯ ಜೋಡಣೆಯೂ ಆಗಿದೆ ಎಂದು ಟೀಕಿಸಿದ ಅವರು, ಈ ಹಿಂದೆ ರಾಜರು ಕೆರೆ, ಕಟ್ಟೆಗಳನ್ನು ಹೇಗೆ ಭರ್ತಿ ಮಾಡುತ್ತಿದ್ದರು. ಮಳೆ ಆಧರಿಸಿ ಲಕ್ಷಾಂತರ ಜನರಿಗೆ ಕುಡಿಯಲು ಮತ್ತು ಕೃಷಿಗೆ ನೀರು ಒದಗಿಸುತ್ತಿದ್ದ ಎಂಬ ಬಗ್ಗೆ ಅಧ್ಯಯನ ನಡೆಸಬೇಕೆಂದು ಸಲಹೆ ನೀಡಿದರು.
ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಜಲ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ವಿಜಯಪುರ ಜಿಲ್ಲೆಯಲ್ಲಿನ ನೀರು ಪೂರೈಕೆ ವ್ಯವಸ್ಥೆಯನ್ನು ನೋಡಿದ್ದು, ಅಲ್ಲಿಯೇ ರಾಷ್ಟ್ರೀಯ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ವಿವರ ನೀಡಿದರು. ಮಳೆ ಆಧರಿತ ಪ್ರದೇಶವಾಗಿದ್ದರೂ ಹಿಂದಿನ ಕಾಲದಲ್ಲಿ ಆದಿಲ್ ಷಾಹಿಗಳು 10 ಲಕ್ಷ ಜನರಿಗೆ ನೀರು ಪೂರೈಕೆ ಮಾಡುವ ವ್ಯವಸ್ಥಿತ ಜಾಲ ರೂಪಿಸಿದ್ದರು ಎಂದು ಸ್ಮರಿಸಿದ ಅವರು, ದೊಡ್ಡವರಿಗಾಗಿ ದೊಡ್ಡ ಯೋಜನೆಗಳು ಜಾರಿಯಾಗುತ್ತವೆ. ಆದರೆ, ಸಣ್ಣ-ಸಣ್ಣವರಿಗಾಗಿ ಸಣ್ಣ-ಸಣ್ಣ ಯೋಜನೆಗಳು ರೂಪಿಸುವುದು ಪರಿಣಾಮಕಾರಿ ಎಂಬುದಕ್ಕೆ ವಿಜಯಪುರ ಉದಾಹರಣೆಯಾಗಿದೆ ಎಂದು ಉಲ್ಲೇಖಿಸಿದರು.
ಸಮಾವೇಶದಲ್ಲಿ 500 ಮಂದಿ ಜಲ ತಜ್ಞರು ಭಾಗವಹಿಸಲಿದ್ದು, ಬರ ಪರಿಸ್ಥಿತಿ, ಲಭ್ಯ ಇರುವ ನೀರಿನ ನಿರ್ವಹಣೆ ಬಗ್ಗೆ ಚರ್ಚಿಸಲಾಗುವುದು ಎಂದ ಅವರು, ಆ.18ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದು, ನೀರಿನ ಮಹತ್ವ ಸಾರುವ ದೃಷ್ಟಿಯಿಂದ ‘ವಿಜಯಪುರ ಘೋಷಣೆ’ ಎಂಬ ನಿರ್ಣಯ ಅಂಗೀಕರಿಸಲಾಗುವುದು ಎಂದರು.
ಅಪಾಯ: ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ದೇಶದ ಮುದ್ದಿನ ಮಗನಂತೆ ಆಗಿದ್ದು, ಈ ನಗರದ ಬಗ್ಗೆ ಎಲ್ಲರಿಗೂ ಅಕ್ಕರೆ ಜಾಸ್ತಿ. ಹೀಗಾಗಿ ಹೆಚ್ಚು ಅಪಾಯವಿದೆ. ಕಾವೇರಿ ಮಾತ್ರವಲ್ಲ, ಎಲ್ಲ ನದಿಗಳ ನೀರನ್ನು ತಂದರೂ ಬೆಂಗಳೂರಿನ ದಾಹ ನೀಗುವುದಿಲ್ಲ ಎಂದು ಅವರು ಹೇಳಿದರು.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ನಾಗರಿಕರಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸಬೇಕು. ಅಲ್ಲದೆ, ಬೆಂಗಳೂರಿನ ತ್ಯಾಜ್ಯದ ನೀರಿನ ಸಂಸ್ಕರಣೆ, ಪುನರ್ ಬಳಕೆಯ ಬಗ್ಗೆಯೂ ಗಂಭೀರವಾಗಿ ಆಲೋಚಿಸಬೇಕಿದೆ. ನಗರದಲ್ಲಿನ ಕೆರೆ-ಕುಂಟೆಗಳನ್ನು ಸಂರಕ್ಷಿಸಲು ಕ್ರಮ ವಹಿಸಬೇಕೆಂದು ಅವರು ಸಲಹೆ ನೀಡಿದರು. ಗೋಷ್ಟಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಉಪಸ್ಥಿತರಿದ್ದರು.
‘ವಿಜಯಪುರದಲಿದ್ದ ಕೆರೆ-ಬಾವಿಗಳನ್ನು ಪುನಶ್ವೇತನಗೊಳಿಸಲಾಗಿದೆ. ಅಲ್ಲಿ ಸಿಕ್ಕಿರುವ ನೀರು ಕುಡಿಯಲು ಯೋಗ್ಯವಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ದೇಶದಲ್ಲೆ ಹನಿ ನೀರಾವರಿ ಪದ್ಧತಿ ಅಳವಡಿಸಿದ ಮೊದಲ ರಾಜ್ಯ ಕರ್ನಾಟಕ. ಸೂಕ್ಷ್ಮ ನೀರಾವರಿ ಮೂಲಕ ನೀರಿನ ಬಳಕೆ ನಿಯಂತ್ರಣಕ್ಕೆ ಮುಂದಾಗಿದೆ’
-ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ







