ಸ್ವಾತಂತ್ರ ಹೋರಾಟಗಾರರನ್ನು ನಿಂದಿಸುವವರು ದೇಶದ್ರೋಹಿಗಳು: ಸಚಿವ ರೈ

ಮಂಗಳೂರು, ಆ. 9: ಬ್ರಿಟಿಷರು ದೇಶ ಬಿಟ್ಟು ತೊಲಗುವವರೆಗೆ ಜಾತಿ, ಮತ, ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಿ, ಹಲವು ರೀತಿ ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೀನಾಯವಾಗಿ ಮಾತನಾಡುವವರು ದೇಶದ್ರೋಹಿಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಅವರು ಇಂದು ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷದ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘಟನೆಗಳಿಂದ ಪ್ರಚೋದನೆ ಪಡೆದಿರುವ ಕೆಲವು ಉಪನ್ಯಾಸಕರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳಿಗೆ ಸುಳ್ಳು ಮಾಹಿತಿ ನೀಡಿ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಯುವ ಸಮಾಜ ಸತ್ಯಾಸತ್ಯತೆಯನ್ನು ಪರಮರ್ಶಿಸಿ ದೇಶದ ಚರಿತ್ರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಜಗತ್ತಿನ ವಿಮರ್ಶಕರ ಪ್ರಕಾರ ಭಾರತದ ಸ್ವಾತಂತ್ರ್ಯ ಚಳುವಳಿ ಜಾತ್ಯಾತೀತ ಸ್ವಾತಂತ್ರ್ಯ ಚಳುವಳಿ ಎಂದೆನಿಸಿಕೊಂಡಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರು ತಾನು ಪ್ರಧಾನ ಮಂತ್ರಿ, ಮುಖ್ಯಮಂತ್ರಿಯಾಗಬೇಕು ಎಂದು ಬಯಸಿರಲಿಲ್ಲ. ದೇಶವನ್ನು ಬ್ರಿಟಿಷರಿಂದ ಬಿಡಿಸಿಕೊಳ್ಳಬೇಕು ಎಂಬುದು ಮಾತ್ರ ಅವರ ಉದ್ದೇಶವಾಗಿತ್ತು. ನಮಗೆ ದೊರೆತಿರುವ ಸ್ವಾತಂತ್ರ್ಯದಲ್ಲಿ ಎಷ್ಟು ಮಹಾತ್ಮರ ಶ್ರಮವಿದೆ ಎಂಬುದನ್ನು ಅರಿತುಕೊಂಡು ಮುನ್ನಡೆಯ ಬೆೀಕಾಗಿದೆ ಎಂದವರು ಅಭಿಪ್ರಾಯಿಸಿದರು.
ಕೆಲವು ಮತೀಯವಾದಿ ಶಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಏಟು ಹಾಕುವ ಕಾರ್ಯದಲ್ಲಿ ಪ್ರವೃತ್ತವಾಗಿವೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡಲಾಗುತ್ತಿವೆ. ನೆಹರೂ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀಕ್ಷಕಿ ಸವಿತಾ ರಮೇಶ್, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮಹಾತ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ದೇಶವನ್ನು ಬಲಿಷ್ಠಗೊಳಿಸಬೇಕಾದ ಯುವಕರು ನೊಂದವರ ಲುವಾಗಿ ಧ್ವನಿ ಎತ್ತಬೇಕು ಎಂದರು.
ವೀಕ್ಷಕ ಐವನ್ ನಿಗ್ಲಿ, ಇಬ್ರಾಹಿಂ ಕೋಡಿಜಾಲ್, ಮೇಯರ್ ಕವಿತಾ ಸನಿಲ್, ತಾರಾನಾಥ ಶೆಟ್ಟಿ, ನವೀನ್ ಡಿ ಸೋಜ, ಸದಾಶಿವ ಉಳ್ಳಾಲ್, ಲೋಕೇಶ್ ಹೆಗ್ಡೆ, ಶಾಲೆಟ್ ಪಿಂಟೋ, ಶಶಿಧರ್ ಹೆಗ್ಡೆ, ಪಿಯೂಷ್, ಉಮಾನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು.







