ಪ್ರತ್ಯೇಕ ಲಿಂಗಾಯತ ಧರ್ಮ: ಇಂದು ಮಠಾಧೀಶರು, ಜನಪ್ರತಿನಿಧಿಗಳ ಸಭೆ

ಬೆಂಗಳೂರು, ಆ. 9: ಲಿಂಗಾಯತ ಧರ್ಮಕ್ಕೆ ‘ಸ್ವತಂತ್ರ ಧರ್ಮ’ದ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ ನಾಳೆ(ಆ.10) ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳ ಸಭೆ ನಡೆಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ ಆರು ಧರ್ಮಗಳಲ್ಲಿದ್ದು, ಅವುಗಳ ಸಾಲಿಗೆ ಲಿಂಗಾಯತ ಧರ್ಮವನ್ನು ಸೇರಿಸಬೇಕು. ಲಿಂಗಾಯತ ಧರ್ಮ ಯಾವುದೇ ಸಂದರ್ಭದಲ್ಲೂ ಹಿಂದೂಧರ್ಮದ ಭಾಗ ಅಲ್ಲ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪಿಸುವ ನಿಟ್ಟಿನಲ್ಲಿ ಸಿರಿಗೆರೆ, ಗದಗ, ಭಾಲ್ಕಿ, ನಾಗನೂರು, ಮುರುಘ, ಸುತ್ತೂರು ಸ್ವಾಮೀಜಿಗಳು ಸೇರಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವ ಪಾಟೀಲ್ ತಿಳಿಸಿದರು.
ಲಿಂಗಾಯತ ಧರ್ಮದಲ್ಲಿ ಜಂಗಮ, ಆರಾಧ್ಯ, ಗೌಡ ಲಿಂಗಾಯತ ಸೇರಿದಂತೆ ಒಟ್ಟು 38 ಉಪ ಜಾತಿಗಳಿವೆ. ಅದೇ ರೀತಿ ‘ವೀರಶೈವ’ ಎಂಬುದು ಲಿಂಗಾಯತ ಧರ್ಮದ ಒಂದು ಒಳಪಂಗಡ. ಈ ಬಗ್ಗೆ ಸಾಕಷ್ಟು ದಾಖಲೆಗಳಿವೆ ಎಂದ ಅವರು, ಈ ಬಗ್ಗೆಯೂ ಚರ್ಚಿಸಲಾಗುವುದು ಎಂದರು.







