ಹಸುಗಳನ್ನು ಕದ್ದ ಆರೋಪ: ಇಬ್ಬರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಬಾಗೇಪಲ್ಲಿ, ಆ.9: ಸೀಮೆ ಹಸುಗಳನ್ನು ಕಳ್ಳತನ ಮಾಡಿ ಟಾಟಾ ಏಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರನ್ನು ಕಂಬಕ್ಕೆ ಕಟ್ಟಿದ ಗ್ರಾಮಸ್ಥರು ಮನಬಂದಂತೆ ಥಳಿಸಿದ ಘಟನೆ ತಾಲೂಕಿನ ಪಾತಪಾಳ್ಯ ಹೋಬಳಿಯ ಮೇಕೊಳ್ಳಪಲ್ಲಿ ಗ್ರಾಮದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಗೋರಂಟ್ಲ ನಿವಾಸಿಗಳಾದ ಮುಹಮ್ಮದ್ ರಫೀ ಮತ್ತು ಖಾಸಿಂ ಎಂಬವರು ಹಲ್ಲೆಗೊಳಗಾದವರು. ಇವರಿಬ್ಬರಿಗೆ ಥಳಿಸಿರುವ ಗ್ರಾಮಸ್ಥರು ನಂತರ ಪೊಲೀಸರಿಗೊಪ್ಪಿಸಿದ್ದಾರೆ.
ಗ್ರಾಮದ ಸುಬ್ಬಾರೆಡ್ಡಿ ಎಂಬವರಿಗೆ ಸೇರಿದ 2 ಸೀಮೆ ಹಸುಗಳನ್ನು ತಡರಾತ್ರಿ ಇವರಿಬ್ಬರು ಕಳ್ಳತನ ಮಾಡಿ ವಾಹನದಲ್ಲಿ ಒಯ್ಯುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಸುಬ್ಬಾರೆಡ್ಡಿಯವರ ವಾಹನ ಎದುರಾಗಿದೆ. ಈ ವೇಳೆ ಅನುಮಾನಗೊಂಡ ಅವರು, ವಾಹನ ತಪಾಸಣೆ ತಕ್ಷಣ ಮಾಡಿದಾಗ ತಮ್ಮದೇ ಹಸುಗಳನ್ನು ಕದ್ದು ಸಾಗಿಸುತ್ತಿದ್ದ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.
ಈ ವೇಳೆ ಸುಬ್ಬಾರೆಡ್ಡಿ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಲ್ಲು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ತಿಳಿದು ಬಂದಿದೆ. ಸುದ್ದಿ ತಿಳಿದ ಪಾತಪಾಳ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.





