ಮತಗಟ್ಟೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

ನೈರೋಬಿ,ಆ.9 : ಕೆನ್ಯಾದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಗರ್ಭಿಣಿ ಮಹಿಳೆಯೊಬ್ಬಳು ಅಲ್ಲಿಯೇ ಮಗುವೊಂದಕ್ಕೆ ಜನ್ಮ ನೀಡಿದ ಘಟನೆ ನೈರೋಬಿಯಲ್ಲಿ ನಡೆದಿದೆ.
ತುಂಬು ಗರ್ಭಿಣಿಯಾಗಿದ್ದ ಪೌಲೀನಾ ಚೆಮನಂಗ್ ಬೆಳಗ್ಗೆಯೇ ಮತ ಚಲಾಯಿಸಲು ವೆಸ್ಟ್ ಪೊಕೊಟ್ ಎಂಬಲ್ಲಿನ ಮತಗಟ್ಟೆಯಲ್ಲಿ ಸರತಿಯಲ್ಲಿ ನಿಂತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಹತ್ತಿರದಲ್ಲಿದ್ದವರು ಆಕೆಯ ಸಹಾಯಕ್ಕೆ ಧಾವಿಸಿದ್ದು ಮತಗಟ್ಟೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ನಂತರ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಆಕೆಯನ್ನು ದಾಖಲಿಸಲಾಗಿತ್ತು. ಆದರೂ ಅಲ್ಲಿಂದ ಹಿಂದಿರುಗಿದ ಆಕೆ ಮತ ಚಲಾಯಿಸಿದ್ದಾರೆ. ``ನಾನೀಗ ಸಂತಸದಿಂದಿದ್ದೇನೆ. ಮಗುವಿಗೆ ಜನ್ಮ ನೀಡಿದ ದಿನದಂದೇ ಮತ ಚಲಾಯಿಸಿದ್ದೇನೆ,'' ಎಂದು ಪೌಲೀನಾ ಹೇಳಿಕೊಂಡಿದ್ದಾರೆ.
ಮಗುವಿಗೆ ಚೆಪ್ಕುರಾ ಎಂಬ ಹೆಸರಿಟ್ಟಿದ್ದು, ಸ್ವಹಿಲಿಯಲ್ಲಿ ಚುನಾವಣೆ ಎಂಬುದನ್ನು ಇದು ಸೂಚಿಸುತ್ತದೆ. ಚೆಮನಂಗ್ ಪೊಕೊಟ್ ಇಲ್ಲಿನ ಪಂಗಡಗಳು ತಮ್ಮ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳು ಹಾಗೂ ಋತುಗಳ ಆಧಾರದಲ್ಲಿ ನಾಮಕರಣ ಮಾಡುತ್ತಾರೆ.







